ಶಾರ್ಜಾ: ದಕ್ಷಿಣ ಆಫ್ರಿಕಾ ತಂಡವನ್ನು ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋಲುಣಿಸಿದ ಅಫ್ಘಾನಿಸ್ಥಾನ ತಂಡವು ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಶುಕ್ರವಾರ (ಸೆ.20) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 177 ರನ್ ಗಳ ಬೃಹತ್ ಅಂತರದಲ್ಲಿ ಸೋಲನುಭವಿಸಿದೆ.
ಶಾರ್ಜಾದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ರೆಹಮನುಲ್ಲಾ ಗುರ್ಬಾಜ್ ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದರೆ, ದ.ಆಫ್ರಿಕಾ ತಂಡವು ಸ್ಪಿನ್ ದಾಳಿಗೆ ಸಿಲುಕಿ ಕೇವಲ 134 ರನ್ ಗೆ ಆಲೌಟಾಯಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಉಳಿದಿರುವಂತೆ ತನ್ನ ವಶಕ್ಕೆ ಪಡೆಯಿತು.
312 ರನ್ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ನಾಯಕ ಬವುಮಾ ಮತ್ತು ಟೊನಿ ಡಿ ಜೋರ್ಜಿ ಮೊದಲ ವಿಕೆಟ್ ಗೆ 72 ರನ್ ಕಲೆ ಹಾಕಿದರು. ಬವುಮಾ 38 ಮತ್ತು ಟೊನಿ 31 ರನ್ ಮಾಡಿದರು. ಆದರೆ ಬಳಿಕ ಯಾವುದೇ ಆಟಗಾರ ನಿಂತು ಆಡಲಿಲ್ಲ. ರೀಜಾ ಹೆಂಡ್ರಿಕ್ಸ್ (17 ರನ್) ಏಡನ್ ಮಾರ್ಕ್ರಮ್ (21 ರನ್) ಗಳಿಸಿದ್ದು ಬಿಟ್ಟರೆ ಉಳಿದ್ಯಾರು ಎರಡಂಕಿ ಮೊತ್ತವನ್ನೂ ಕಲೆ ಹಾಕಲಿಲ್ಲ. ಕೊನೆಗೆ 34.2 ಓವರ್ ಗಳಲ್ಲಿ ಆಫ್ರಿಕಾ ಕೇವಲ 134 ರನ್ ಗೆ ಆಲೌಟಾಯಿತು.