ಮುಂದಿನ ವಾರದಿಂದ ಒಮಾನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗುವ ತಂಡ 12 ಕೋಟಿ ರೂ (1.6 ಮಿಲಿಯನ್ ಯುಎಸ್ಡಿ) ಮತ್ತು ರನ್ನರ್ ಅಪ್ ಆಗುವ ತಂಡ ಅದರಲ್ಲಿ ಅರ್ಧದಷ್ಟು ಪಡೆಯಲಿದೆ ಎಂದು ಭಾನುವಾರ ಐಸಿಸಿ ಘೋಷಿಸಿದೆ.
ಈ ಪಂದ್ಯದ ಮೊದಲ ರೌಂಡ್ನಲ್ಲಿ ಬಾಂಗ್ಲಾದೇಶ, ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಒಮನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ಭಾಗವಹಿಸಲಿದೆ. ಸೂಪರ್ 12 ಹಂತಕ್ಕೆ ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಇವು ದೃಢೀಕೃತ ತಂಡಗಳಾಗಿವೆ.
ಅ.17ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಮಹಾ ಕದನದಲ್ಲಿ ಆಡುವ 16 ತಂಡಗಳು ಒಟ್ಟು 42 ಕೋಟಿ ರೂ. ಮೊತ್ತವನ್ನು ಹಂಚಿಕೊಳ್ಳಲಿವೆ. ಚಾಂಪಿಯನ್ ತಂಡ 12 ಕೋಟಿ, ರನ್ನರ್ ಅಪ್ ತಂಡ 6 ಕೋಟಿ ರೂ. ಪಡೆದರೆ, ಸೆಮಿಫೈನಲ್ಸ್ನಲ್ಲಿ ಸೋಲುವ ತಂಡಗಳು ತಲಾ 3 ಕೋಟಿ ರೂ. ಪಡೆಯಲಿವೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
2016ರ ವಿಶ್ವಕಪ್ನಿಂದ ಸೂಪರ್ 12ನಲ್ಲಿ ತಂಡಗಳು ಗೆಲ್ಲುವ ಪ್ರತಿಯೊಂದು ಪಂದ್ಯಕ್ಕೂ ಬೋನಸ್ ಸಿಗಲಿದೆ. ಒಟ್ಟು 30 ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯ ಗೆದ್ದ ತಂಡ 30 ಲಕ್ಷರೂ ಪಡೆಯಲಿವೆ. ಇದಕ್ಕಾಗಿ ಒಟ್ಟು 9 ಕೋಟಿ ರೂ. ಮೀಸಲಿಡಲಾಗಿದೆ.
ಇನ್ನು, ಕ್ವಾರ್ಟರ್ ಫೈನಲ್ ಪ್ರವೇಶಿಸುವ ತಂಡಗಳಿಗೆ 5,60,000 ಡಾಲರ್ ಮೀಸಲಿಡಲಾಗಿದೆ. 8 ತಂಡಗಳೂ ತಲಾ 70 ಸಾವಿರ ಡಾಲರ್ ಪಡೆಯಲಿವೆ. ಮೊದಲ ಸುತ್ತಿನಲ್ಲಿ ಗೆಲ್ಲುವ ತಂಡಗಳು 40 ಸಾವಿರ ಯುಎಸ್ಡಿ ಪಡೆಯಲಿವೆ. ಇನ್ನು, ಮೊದಲ ಸುತ್ತಿನಲ್ಲಿ ಸೋತು ಹೊರ ಬೀಳುವ ತಂಡಗಳು ತಲಾ 40 ಸಾವಿರ ಡಾಲರ್ ಪಡೆಯಲಿವೆ.