ಮಂಗಳೂರು: ಕೆಲಸದ ನಿಮಿತ್ತ ಥೈಲ್ಯಾಂಡಿನಲ್ಲಿ ನೆಲೆಸಿದ್ದ ಮಂಗಳೂರಿನ ಯುವಕನಿಗೆ ಅಲ್ಲಿನ ಯುವತಿ ಜೊತೆಗೆ ಪ್ರೇಮಾಂಕುರವಾಗಿದ್ದು ಡಿ.5ರಂದು ತುಳುನಾಡಿನ ಸಂಪ್ರದಾಯದಲ್ಲಿಯೇ ಮಂಗಳಾದೇವಿ ದೇವಸ್ಥಾನದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಮಂಗಳೂರಿನ ಯುವಕ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್ ಯುವತಿ ಮೊಂತಕಾನ್ ಸಸೂಕ್ ಮಂಗಳೂರಿನ ಮಂಗಳಾದೇವಿ ಸನ್ನಿಧಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆಯೇ ಥೈಲ್ಯಾಂಡ್ ಸಂಪ್ರದಾಯ ಪ್ರಕಾರ ಇವರು ಜುಲೈನಲ್ಲಿ ವಿವಾಹವಾಗಿದ್ದರು.
ಮಂಗಳೂರಿನ ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪೆನಿ ಮುನ್ನಡೆಸುತ್ತಿದ್ದಾರೆ. ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಸೇವೆ ಒದಗಿಸುತ್ತಿದ್ದಾರೆ.
ಥೈಲ್ಯಾಂಡ್ ಹೋಗಿದ್ದ ವೇಳೆ ಪೃಥ್ವಿರಾಜ್‌ಗೆ ಪ್ರೇಮಿಗಳ ದಿನವೇ ಮೊಂತಕನ್ ಸಸೂಕ್ ಪರಿಚಯವಾಗಿತ್ತು. ಆಬಳಿಕ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪರಸ್ಪರ ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಪೃಥ್ವಿರಾಜ್ ತಿಳಿಸಿದ್ದಾರೆ. ಥೈಲ್ಯಾಂಡ್ ಯುವತಿಯನ್ನು ಮದುವೆಯಾಗುವ ವಿಷಯ ತಿಳಿಸಿದಾಗ ಪಾಲಕರು ಆಘಾತಕ್ಕೆ ಒಳಗಾಗಿದ್ದರು. ಬಳಿಕ ಸಮ್ಮತಿ ನೀಡಿದರು ಎಂದು ಪೃಥ್ವಿರಾಜ್ ಹೇಳಿದ್ದಾರೆ.
ಥೈಲ್ಯಾಂಡ್ ಭಾಷೆ ಸ್ವಲ್ಪ ಸ್ವಲ್ಪ ಕಲಿಯತೊಡಗಿದ್ದೇನೆ. ಕೆಲವು ಪದಗಳು ಬರುತ್ತವೆ. ಮೊಂತಕಾನ್ ಕೂಡ ತುಳು ಭಾಷೆಯನ್ನು ಕಲಿಯುತ್ತಿದ್ದು, ಮುಂದೆ ತುಳುವಿನಲ್ಲೇ ಮಾತನಾಡಲಿದ್ದಾರೆ ಎಂದು ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.