ಉಡುಪಿ: ಮಣಿಪಾಲ ಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತಂತ್ರಜ್ಞರಾಗಿರುವ ಪರ್ಕಳದ ಆರ್. ಮನೋಹರ್ ಅವರು ಅಭಿವೃದ್ಧಿ ಪಡಿಸಿದ ಎರಡು ದೂರದರ್ಶಕಗಳು (ಬೈನಾಕುಲರ್) ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಕ್ಸ್ ಹಾಗೂ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿವೆ.
ಇತ್ತೀಚೆಗೆ ಅಯೋಧ್ಯೆ ಉದ್ಘಾಟನೆ ಸಂದರ್ಭ ಇವರು ತಯಾರಿಸಿದ್ದ ಬೈನಾಕ್ಯುಲರ್‌ನ್ನು ಬಳಕೆ ಮಾಡಲಾಗಿತ್ತು. ಇದಲ್ಲದೆ ಕೇಂದ್ರ ಸರಕಾರ ಕೂಡ ಇವರ ಬೈನಾಕ್ಯುಲರ್‌ಗೆ ಆರ್ಡರ್ ನೀಡಿದೆ.
ಮನೋಹರ್ ಅವರು ಅಭಿವೃದ್ಧಿಪಡಿಸಿರುವ ಅತಿ ಶಕ್ತಿಶಾಲಿ ಹಾಗೂ ವಿಶಿಷ್ಟ, 200ರಿಂದ 240 ಮೆಗ್ನಿಫಿಕೇಷನ್ ಇರುವ ಬೈನಾಕ್ಯುಲರ್‌ನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಗೊಳಿಸಲಾಗಿದೆ. ಈ ಸಂಬಂಧ ಸಂಸ್ಥೆ ಆರ್.ಮನೋಹರ್ ಅವರಿಗೆ ಪ್ರಮಾಣಪತ್ರವನ್ನೂ ನೀಡಿದೆ.
ಸುಮಾರು ಎರಡು ಕೆ.ಜಿ. ತೂಕದ 4 ಅಡಿ ಉದ್ದದ ಬೈನಾಕುಲರ್‌ನ್ನು ಸತತ ಪ್ರಯೋಗದ ಬಳಿಕ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಎರಡೂ ಕಣ್ಣುಗಳ ಮೂಲಕ ನೇರವಾಗಿ ಚಂದ್ರನ ಮೇಲ್ಮೀಯನ್ನೂ ಸ್ಪಷ್ಟವಾಗಿ ವೀಕ್ಷಿಸಬಹುದು. ಹೆಚ್ಚಿನ ದೂರದರ್ಶಕಗಳು ಬಗ್ಗಿ ನೋಡುವ ರೀತಿಯಲ್ಲಿದ್ದರೆ, ನೇರವಾಗಿ ಎರಡೂ ಕಣ್ಣುಗಳ ಮೂಲಕ ನೋಡುವ ಸೌಲಭ್ಯವನ್ನು ಇವರ ದೂರದರ್ಶಕ ಹೊಂದಿದೆ. ಇವರು ಅಭಿವೃದ್ಧಿಪಡಿಸಿದ ಒಂದೂವರೆ ಅಡಿ ಉದ್ದದ 40ರಿಂದ 60 ಮೆಗ್ನಿಫಿಕೇಷನ್ ಹೊಂದಿರುವ ಸಣ್ಣ ದೂರದರ್ಶಕ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ.
ಇವರ ಆವಿಷ್ಕಾರವು ಗಿನ್ನೆಸ್ ವಿಶ್ವ ದಾಖಲೆ ಹಾಗೂ ಭಾರತದ ಲಿಮ್ಮಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸ್ಥಾನ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ.