ಬೆಂಗಳೂರು: ಎಲ್ಲಾ ರೀತಿಯ ಬಸ್ ಪಾಸ್ ಗಳನ್ನು ಸೆಪ್ಟಂಬರ್ 15 ರಿಂದ ಡಿಜಿಟಲೀಕರಣಗೊಳಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ತೀರ್ಮಾನಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಬಿಎಂಟಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಹಿಂದಿನಂತೆ ಡಿಜಿಟಲ್ ಮತ್ತು ಮುದ್ರಿತ ಬಸ್ ಪಾಸ್ ಗಳನ್ನು ನೀಡಲು ತೀರ್ಮಾನಿಸಿದೆ.
ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ಗಳನ್ನು ಮೊಬೈಲ್ ಆಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿತ್ತು. ಪ್ರಯಾಣಿಕರಿಗೆ ಸುಲಭ ಮತ್ತು ಸರಾಗವಾಗಿ ಪಾಸ್ ದೊರಕಬೇಕೆಂಬ ಉದ್ದೇಶದಿಂದ ಹಾಗೂ ಇಲಾಖೆಯನ್ನು ಕಾಗದರಹಿತಗೊಳಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 15 ರಿಂದ ಅನ್ವಯವಾಗುವಂತೆ ಡಿಜಿಟಲ್ ಪಾಸ್ ಗಳನ್ನು ವಿತರಿಸಲು ನಿರ್ಧರಿಸಿತ್ತು.
ಬಿಎಂಟಿಸಿ ಡಿಜಿಟಲ್ ಪಾಸ್ ಖರೀದಿ ತುಂಬ ಸುಲಭ ಹೌದು. . ಪ್ರಯಾಣಿಕರು ಪ್ಲೇ ಸ್ಟೋರ್ ನಿಂದ ಟುಮ್ಯಾಕ್ ಆಪ್ ಡೌನ್ ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ನಂತರ ಬೇಕಾದ ಪಾಸ್ ಆಯ್ಕೆ ಮಾಡಿಕೊಂಡು ವಿವಿರಗಳನ್ನು ಭರ್ತಿ ಮಾಡಿ ಭಾವಚಿತ್ರ ಸಹಿತ ಅಪ್ ಲೋಡ್ ಮಾಡಬೇಕು. ಈ ಅರ್ಜಿ ದೃಢೀಕರಣಗೊಂಡ ನಂತರ ಪಾಸ್ ನ ಮೊತ್ತವನ್ನು ಪಾವತಿಸಿ ಬಸ್ ಪಾಸ್ ಪಡೆಯಬಹುದಾಗಿತ್ತು. ಶುಕ್ರವಾರವಷ್ಟೇ ಈ ನಿರ್ಧಾರವನ್ನು ಪ್ರಕಟಿಸಿದ್ದ ಬಿಎಂಟಿಸಿ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಡಿಜಿಟಲ್ ಪಾಸ್ ಗಳ ಜೊತೆಗೆ ಮುದ್ರಿತ ಪಾಸ್ ಗಳನ್ನೂ ವಿತರಿಸುವುದಾಗಿ ತಿಳಿಸಿದೆ.