ಚೆನ್ನೈ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೆ ಕಷ್ಟಪಟ್ಟು ಓದುವವರ ಸಂಖ್ಯೆ ತೀರಾ ವಿರಳ ಎಂದು ಹೇಳಬಹುದು. ಪರೀಕ್ಷೆಯಲ್ಲಿ ಮನಸ್ಸಿಗೆ ಬಂದಂತೆ ಏನೋ ಗೀಚಿದರೆ ಅಂಕಗಳು ಬರುತ್ತವೆ ಎಂದು ಹಲವು ವಿದ್ಯಾರ್ಥಿಗಳು ಭಾವಿಸಿದ್ದಾರೆ. ಹೀಗಾಗಿ ಕೆಲವರು ಪೇಜ್ ತುಂಬಿಸಿ ಹೋಗುತ್ತಾರೆ.
ಅಲ್ಲದೆ, ಅನೇಕ ಅಕ್ರಮಗಳನ್ನು ಸಹ ನಡೆಯುತ್ತವೆ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡವಾಗಲೂ ಕೆಲವೊಂದು ಎಡವಟ್ಟುಗಳಾಗುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಲು ತಮಿಳುನಾಡು ಸರ್ಕಾರ ಕೃತಕ ಬುದ್ಧಿಮತ್ತೆ (AI) ಬಳಸಿಕೊಳ್ಳಲು ಮುಂದಾಗಿದೆ.
ಹೌದು. . . ಈಗಾಗಲೇ ತಮಿಳುನಾಡಿನಲ್ಲಿ ಈ ಪ್ರಯೋಗ ಆರಂಭವಾಗಿದೆ. ತಮಿಳುನಾಡು ಸರ್ಕಾರವು ಕೃತಕ ಬುದ್ಧಿಮತ್ತೆಯೊಂದಿಗೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡುವ ಪ್ರಯೋಗವನ್ನು ಕೈಗೆತ್ತಿಕೊಂಡಿದೆ. ಈ ಪ್ರಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಪ್ರಸಕ್ತ ಶೈಕ್ಷಣಿಕ ವರ್ಷದೊಳಗೆ ಈ ಬಗ್ಗೆ ಅಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸಿದ ಬಳಿಕ ಈ ತಂತ್ರಜ್ಞಾನವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ಪ್ರಯೋಗವನ್ನು ತಮಿಳುನಾಡು ರಾಜ್ಯ ಯೋಜನಾ ಆಯೋಗವು ಮೇಲ್ವಿಚಾರಣೆ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿ ಮೊದಲು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯನ್ನು ಕೃತಕ ಬುದ್ಧಿಮತ್ತೆಗೆ ಜೋಡಿಸಲಾಗುತ್ತದೆ. ಈ ಸಮಯದಲ್ಲಿ ಕೃತಕ ಬುದ್ಧಿಮತ್ತೆಯು ಉತ್ತರ ಪತ್ರಿಕೆಯನ್ನು ನೋಡಿ ತಪ್ಪು ಉತ್ತರವನ್ನು ಕಂಡುಹಿಡಿಯುತ್ತದೆ. ಇದಿಷ್ಟೇ ಅಲ್ಲದೆ, ಮತ್ತೆ ಮತ್ತೆ ಬರೆದದ್ದನ್ನು ಸಹ ಕಂಡುಹಿಡಿಯುತ್ತದೆ. ಬಳಿಕ ಸಂಬಂಧಪಟ್ಟ ಪರೀಕ್ಷಕರಿಗೆ ಈ ವಿಷಯವನ್ನು ತಿಳಿಸುತ್ತದೆ.