ಮಂಡೆಕೋಲಿನಲ್ಲಿ ಬೀಡು ಬಿಟ್ಟ 11 ಆನೆಗಳು: ಗಜಭೀತಿಯಲ್ಲಿ ನಲುಗಿದ ಗ್ರಾಮ

Date : 23-04-2017

ಮಂಡೆಕೋಲಿನಲ್ಲಿ ಬೀಡು ಬಿಟ್ಟ 11 ಆನೆಗಳು: ಗಜಭೀತಿಯಲ್ಲಿ ನಲುಗಿದ ಗ್ರಾಮ

ಸುಳ್ಯ: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶವಾದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 11 ಆನೆಗಳು ಬೀಡು ಬಿಟ್ಟಿದ್ದು ಇಡೀ ಗ್ರಾಮವೇ ಗಜ ಭೀತಿಯಲ್ಲಿ ನಲುಗಿದೆ. ಗಡಿ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಗ್ರಾಮದ ವಿವಿಧ ಭಾಗಗಳಲ್ಲಿ ಹಿಂಡು ಹಿಂಡಾಗಿ ಬೀಡು ಬಿಟ್ಟಿರುವ ಮದಗಜಗಳ ಭೀತಿಯಿಂದ ಜನತೆ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಮಂಡೆಕೋಲು ಗ್ರಾಮದ ಕಲ್ಲಡ್ಕ, ಪೆರಾಜೆ ಭಾಗದಲ್ಲಿ ಆರು ಆನೆಗಳ ಹಿಂಡು ಒಂದು ವಾರದಿಂದ ಭೀತಿ ಹುಟ್ಟಿಸುತ್ತಿದ್ದರೆ, ಗ್ರಾಮದ ಪುತ್ಯ, ಬೊಳುಗಲ್ಲು ಭಾಗದಲ್ಲಿ ಐದು ಆನೆಗಳಿವೆ. ಕೇರಳದ ಪರಪ್ಪೆ ಭಾಗದಿಂದ ಪಯಸ್ವಿನಿ ಹೊಳೆ ದಾಟಿ ಕಲ್ಲಡ್ಕ ಭಾಗಕ್ಕೆ ಬಂದಿರುವ ಆನೆಗಳ ಹಿಂಡು ವಾರದಿಂದ ಕಲ್ಲಡ್ಕ, ಪೆರಾಜೆ, ಕನ್ಯಾನ, ಅಕ್ಕಪ್ಪಾಡಿ ಭಾಗದಲ್ಲಿ ಭೀತಿ ಹುಟ್ಟಿಸುತ್ತಿದೆ.

ಜನವಸತಿ ಪ್ರದೇಶದ ಸಮೀಪವೇ ಇರುವ ಅರಣ್ಯದಲ್ಲಿ ಆನೆಗಳು ಬೀಡು ಬಿಟ್ಟಿದ್ದು ಪದೆ ಪದೇ ಗ್ರಾಮದ ಕೃಷಿಕರ ಕೃಷಿ ತೋಟಗಳಿಗೆ ನುಗ್ಗುತ್ತಿದೆ. ಹಗಲಿನ ವೇಳೆಯಲ್ಲಿಯೂ ರಸ್ತೆ ಬದಿ. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಆನೆಗಳ ಭಯದಿಂದ ಜನರು ಮನೆಯಿಂದ ಹೊರ ಬರಲು, ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಪುತ್ಯ ಭಾಗದಲ್ಲಿ ಕಾಣಿಸಿಕೊಂಡಿರುವ ಐದು ಆನೆಗಳ ಹಿಂಡು ಪತ್ಯ, ಬೊಳುಗಲ್ಲು, ಮಾವಂಜಿ ಭಾಗದಲ್ಲಿ ಭೀತಿ ಹುಟ್ಟಿಸಿ ಕೃಷಿ ನಾಶ ಮಾಡುತಿದೆ. ಅರಣ್ಯ ಇಲಾಖೆಯವರು ಮತ್ತು ಸಾರ್ವಜನಿಕರು ಆನೆಗಳನ್ನು ಓಡಿಸಲು ಪ್ರಯತ್ನ ನಡೆಸುತ್ತಿದ್ದರೂ ಆನೆಗಳು ದೂರ ಸರಿಯುತ್ತಿಲ್ಲ. ಅರಣ್ಯ ಇಲಾಖೆಯವರು ಮಂಡೆಕೋಲಿನಲ್ಲಿ ಕ್ಯಾಂಪ್ ನಡೆಸಿ ಆನೆಗಳನ್ನು ದೂರ ಅಟ್ಟಲು ಪ್ರಯತ್ನ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಆನೆ ಹಾವಳಿ:
ಕಳೆದ ಅನೇಕ ವರ್ಷಗಳಿಂದ ಮಂಡೆಕೋಲು ಗ್ರಾಮ ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದೆ. ಹಲವು ವರ್ಷಗಳ ಕಾಲ ಆನೆಗಳು ಜನರ ನಿದ್ದೆ ಗೆಡಿಸಿ, ಭಯದ ವಾತಾವರಣವನ್ನು ಸೃಷ್ಠಿಸುತ್ತಲೇ ಇದೆ. ಕೋಟ್ಯಾಂತರ ರೂಗಳ ಕೃಷಿ ಹಾನಿಯನ್ನೂ ಮಾಡಿದೆ. ಊರಿನ ಮಂದಿ ಆನೆ ಓಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆನೆ ಹಾವಳಿ ತಡೆಗೆ ಎಲ್ಲಾ ಪ್ರಯತ್ನಗಳನ್ನೂ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ನಡೆಸುತ್ತಲೇ ಬಂದಿದೆ. ಆದರೆ ಶಾಶ್ವತ ಪರಿಹಾರ ಸಿಗಲೇ ಇಲ್ಲ. ಆಗಾಗ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ಭೀತಿ ಹುಟ್ಟಿಸುತ್ತಲೇ ಇದೆ. ಆನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಮಂಡೆಕೋಲು ಗ್ರಾಮದ ಇಂಚು ಇಂಚು ಕೂಡ ಗಜಪಡೆಗಳ ಹೆಜ್ಜೆಗೆ ಪುಡಿ ಪುಡಿಯಾಗಿದೆ. ಮದ ಗಜಗಳ ಆರ್ಭಟಕ್ಕೆ ಇಡೀ ನಾಡಿಗೆ ನಾಡೇ ನಲುಗಿ ಹೋಗಿದೆ. ಇಡೀ ಊರಿನ ಜನರು ನಿದ್ರೆ, ಆಹಾರ ಬಿಟ್ಟು ತಾವು ಮಾಡಿದ್ದ ಕೃಷಿಯನ್ನು ಸಂರಕ್ಷಿಸುವುದಕ್ಕೆ ಆನೆಗಳನ್ನು ಓಡಿಸುವುದರಲ್ಲಿಯೇ ಕಾಲ ಕಳೆಯಬೇಕಾಗಿ ಬಂದಿದೆ. ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಬೆಂಕಿ ಹಾಕಿ ಹೀಗೆ ತಮಗೆ ಗೊತ್ತಿರುವ ಎಲ್ಲಾ ಪ್ರಯತ್ನವನ್ನು ಮಾಡಿ ಆನೆಗಳನ್ನು ಓಡಿಸಲು ಪ್ರಯತ್ನ ನಡೆಸಿದರೂ  ಅದ್ಯಾವುದನ್ನೂ ಲೆಕ್ಕಿಸದ ಮದಗಜಗಳು ನಿರಂತರ ಗ್ರಾಮದಲ್ಲೇ ವಿಹರಿಸುತ್ತಿವೆ.

ಆನೆಗಳ ಭಯದಿಂದ ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿಯಿಂದ ಶಾಲೆ, ಅಂಗನವಾಡಿಗಳಿಗೆ ರಜೆ ನೀಡಬೇಕಾಗಿಯೂ ಬಂದಿತ್ತು. ಸಾರ್ವಜನಿಕರನ್ನು, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಹಲವು ಬಾರಿ ಆನೆಗಳು ಬೆನ್ನಟ್ಟಿ ಬಂದದ್ದೂ ಇದೆ. ನಾಡಿನಲ್ಲಿ ಆನೆಗಳ ಉಪಟಳ ಮಿತಿ ಮೀರಿದಾಗ ನಾಡಿನ ಜನತೆ ದೇವರ ಮೊರೆ ಹೋದದ್ದೂ ಇದೆ. ಕಳೆದ ಕೆಲವು ತಿಂಗಳೀನಿಂದ ಆನೆ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ ಇದೀಗ ಮತ್ತೆ ಆನೆಗಳ ಉಪಟಳ ಮಿತಿ ಮೀರಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಮಂಡೆಕೋಲಿನಲ್ಲಿ ಆನೆಗಳ ಉಪಟಳವನ್ನು ತಡೆಯಲು ಅರಣ್ಯ ಇಲಾಖೆಯ ವತಿಯಿಂದ ಗ್ರಾಮದಲ್ಲಿ ಅಲ್ಲಲ್ಲಿ ಸುಮಾರು 20 ಕಿ.ಮಿ.ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ಆನೆ ಕಂದಕಗಳನ್ನು ನಿರ್ಮಿಸಿದ ಭಾಗದಲ್ಲಿ ಬಾರದೆ ಬೇರೆ ಕಡೆಯಿಂದ ಆನೆಗಳು ಊರಿಗೆ ನುಗ್ಗುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪ್ರಧಾನಿಯ ಗಮನಕ್ಕೂ ತರಲಾಗಿತ್ತು:
ಮಂಡೆಕೋಲಿನ ಕಾಡಾನೆಗಳ ಹಾವಳಿ ಹಲವು ವರ್ಷಗಳಿಂದ ಇರುವ ಸಮಸ್ಯೆ. ಇಲ್ಲಿನ ಕಾಡಾನೆಯ ಹಾವಳಿಯ ಬಗ್ಗೆ ಬಾಲಕಿಯೋರ್ವಳು ಪತ್ರ ಬರೆದು ಪ್ರಧಾನಮಂತ್ರಿಯ ಗಮನಕ್ಕೂ ತರಲಾಗಿತ್ತು. ಊರಿನಲ್ಲಿ ಕಾಡಾನೆಗಳ ಹಾವಳಿಯಿಂದ ಭಯದಿಂದ ಶಾಲೆಗೆ ಹೋಗಲು ಶಾಲೆಗೆ ಸಾಧ್ಯವಾಗುತ್ತಿಲ್ಲ. ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ ಎಂದು ಮಂಡೆಕೋಲು ಗ್ರಾಮದ ಮಿತ್ತಿಲದ ನಾರಾಯಣ ಮೂರ್ತಿಯವರ ಪುತ್ರಿ, ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿಧ್ಯಾರ್ಥಿನಿ ಎನ್.ಎಂ.ನಿಕಿತಾ ಪ್ರಧಾನಿಗೆ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯ ಕಾರ್ಯಾಲಯ ಆನೆ ಹಾವಳಿಯ ತಡೆಗೆ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆಯನ್ನು ನೀಡಿತ್ತು.

All the news published on this app is sourced from our own website https://newskannada.com is solely owned and managed by Spearhead Media Pvt Ltd, India.
Menu