ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕವಾಗಿ ನಡೆಸುವ ಎರಡು ದಿನಗಳ ಮಾನಿಟರಿ ಪಾಲಿಸಿ ಕಮಿಟಿ ಸಭೆ ಬುಧವಾರ ಆರಂಭವಾಗಲಿದೆ.
ಜೂನ್ 7ರಂದು ಸಭೆಯ ನಿರ್ಣಯಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ. ಕಳೆದ ಬಾರಿಯ ಎಂಪಿಸಿ ಸಭೆ ಏಪ್ರಿಲ್ ತಿಂಗಳಲ್ಲಿ ನಡೆದಿತ್ತು. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಸಭೆಯಾಗಲಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿದಂತೆ ಆರು ಜನರು ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಇದ್ದಾರೆ. ಇವರ ಪೈಕಿ ಮೂವರು ಆರ್ಬಿಐಯೊಳಗೆಯೇ ಇರುವ ಅಧಿಕಾರಿಗಳಾದರೆ ಇನ್ನೂ ಮೂವರು ಹೊರಗಿನ ಸದಸ್ಯರಾಗಿರುತ್ತಾರೆ.
ಏಪ್ರಿಲ್ 5ರಂದು ಆರ್ಬಿಐ ಬಡ್ಡಿದರವನ್ನು ಶೇ. 6.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಎಂಪಿಸಿಯಲ್ಲಿರುವ ಆರು ಸದಸ್ಯರಲ್ಲಿ ಐವರು ಬಡ್ಡಿದರ ಯಥಾಸ್ಥಿತಿ ಉಳಿಸುವ ಪರವಾಗಿ ಮತ ಹಾಕಿದ್ದಾರೆ. ಒಬ್ಬರಿಂದ ಮಾತ್ರವೇ ವಿರುದ್ಧ ಮತ ಬಂದಿದೆ. ಈ ಬಾರಿಯೂ 5:1 ಮತಗಳ ಬೆಂಬಲದಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಬರಬಹುದು.
ಈ ಸಭೆಯಲ್ಲಿ ಎಲ್ಲರ ಚಿತ್ತ ಹೆಚ್ಚಾಗಿ ಬ್ಯಾಂಕ್ ಬಡ್ಡಿದರ ವಿಚಾರದ ಬಗ್ಗೆ ನೆಟ್ಟಿರುತ್ತದೆ. ಜೊತೆಗೆ, ಜಿಡಿಪಿ ಮತ್ತು ಹಣದುಬ್ಬರದ ಬಗ್ಗೆ ಆರ್ಬಿಐ ಮಾಡುವ ಅಂದಾಜು ಕುರಿತೂ ಕುತೂಹಲ ಇರುತ್ತದೆ.