ವಿಜಯನಗರ: ಈ ಬಾರಿಯ ಉತ್ತಮ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ 2ರ ಸುಮಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ತುಂಗಭದ್ರಾ ಜಲಾಶಯವನ್ನು ಆಶ್ರಯಿಸಿ 13 ಲಕ್ಷ ಎಕರೆಗೂ ಅಧಿಕ ಜಮೀನಿನಲ್ಲಿ ಕೃಷಿ ಕಾರ್ಯ ನಡೆಯುತ್ತಿದ್ದು, ಈ ಬಾರಿ ಎರಡೂ ಬೆಳೆಗೆ ನೀರು ಲಭಿಸುವುದು ಬಹುತೇಕ ನಿಶ್ಚಿತವಾಗಿದೆ.
ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಅವರು ಬಾಗಿನ ಅರ್ಪಿಸಿದ್ದರಿಂದ ರಾಜ್ಯ ಮಾತ್ರವಲ್ಲ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ಉತ್ತಮ ಸಂದೇಶವೊಂದು ರವಾನೆಯಾಗುವಂತಾಯಿತು.
ಆಗಸ್ಟ್ 10 ರಂದು ರಾತ್ರಿ 19ನೇ ಕ್ರಸ್ಟ್ ಗೇಟ್ ನೀರಲ್ಲಿ ಕೊಚ್ಚಿ ಹೋದ ಬಳಿಕ ತೀವ್ರ ಆತಂಕ ನೆಲೆಸಿತ್ತು. ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ತಜ್ಞರು, ಸಿಬ್ಬಂದಿಯ ಅವಿರತ ಪ್ರಯತ್ನದಿಂದ ವಾರದೊಳಗೆ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು ಹಾಗೂ 30 ಟಿಎಂಸಿ ಅಡಿಯಷ್ಟು ನೀರು ಪೋಲಾಗುವುದು ತಪ್ಪಿತ್ತು. ಮತ್ತೆ ಮಳೆ ಬಂದು ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇದೀಗ ಬಾಗಿನ ಅರ್ಪಿಸಿದ್ದಾರೆ.
ಈ ಬಾರಿ ಮುಂಗಾರು ಆರಂಭದಲ್ಲೇ ಉತ್ತಮವಾಗಿದ್ದರಿಂದ ಜುಲೈ ಕೊನೆಯ ವಾರದಲ್ಲೇ ಜಲಾಶಯ ತುಂಬಿಹೋಗಿತ್ತು. ಆಗಸ್ಟ್ 6ರಂದು ತುಂಗಭದ್ರಾಕ್ಕೆ ಬಾಗಿನ ಅರ್ಪಿಸಲು ಮೊದಲಿಗೆ ದಿನಾಂಕ ನಿಗದಿಯಾಗಿತ್ತು. ಆದರೆ ಆ ಸಮಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿತ್ತು. ಹೀಗಾಗಿ ಸಿಎಂ ಅವರೂ ತಮ್ಮ ಕಾರ್ಯಕ್ರಮ ಮುಂದೂಡಿದ್ದರು.