ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತಗೊಂಡ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಗೋವಾ- ಕಾರವಾರ ಸಂಚಾರವನ್ನು ತಾತ್ಕಾಲಿಕ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾರವರು ಆದೇಶಿಸಿದ್ದಾರೆ.
ಈ ಆದೇಶ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಈಆರ್ ಬಿ ಕಂಪನಿ ಕಾಳಿ ನದಿ ಸೇತುವೆ ಭದ್ರತೆ ಕುರಿತು ವರದಿ ನೀಡುವವರೆಗೆ ಸಂಪೂರ್ಣ ಬಂದ್ ಆಗಿರಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಐಆರ್‌ಬಿ ಕಂಪನಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ನಡೆಸುತ್ತಿದೆ. ಕಾಳಿ ನದಿಯಲ್ಲಿ ಒಂದು ಹೊಸ ಸೇತುವೆ ನಿರ್ಮಿಸಿದೆ. ಆದರೆ ಇನ್ನೊಂದು ಬದಿಯಲ್ಲಿ ಹಳೇಯ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿ ನೀಡಿತ್ತು.
ನಿಯಮದ ಪ್ರಕಾರ ಐಆರ್‌ಬಿ ಎರಡು ಹೊಸ ಸೇತುವೆಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ 41 ವರ್ಷದ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿ ನೀಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನಗರ ಠಾಣೆಯಲ್ಲಿ ಬಿಎನ್‌ಎಸ್ ಕಲಂ 110, 125, 285 ಅಡಿ ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.