Bengaluru 17°C

ಸೇತುವೆ ಕುಸಿತ: ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ ಗಾಯ

ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ ಕುಸಿದು ಬಿದ್ದಿದ್ದು, ಅದರ ಮೇಲೆ ಚಲಿಸುತ್ತಿದ್ದ ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿರುವ ಘಟನೆ ನಡೆದಿದೆ. 

ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ ಕುಸಿದು ಬಿದ್ದಿದ್ದು, ಅದರ ಮೇಲೆ ಚಲಿಸುತ್ತಿದ್ದ ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿರುವ ಘಟನೆ ನಡೆದಿದೆ.


ಹೊಸ ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದುದರಿಂದ ಭಾರಿ ಅನಾಹುತ ಆಗಿಲ್ಲ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್‌ನಲ್ಲಿರುವ ಈ ಸೇತುವೆಯನ್ನು ಕಾರವಾರ- ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಿಸಲಾಗಿದೆ.


ಇದು ಸುಮಾರು 60 ವರ್ಷ ಹಳೆಯದಾದ ಸೇತುವೆ. ಇತ್ತೀಚೆಗೆ ನಿರ್ಮಿಸಲಾದ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಹಳೆಯ ಸೇತುವೆಯನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿ ಸೇತುವೆ ಕುಸಿದು ಕೆಳಗೆ ಬಿದ್ದಿದ್ದು, ಅದರ ಮೇಲಿದ್ದ ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿದೆ.


ಚಾಲಕನನ್ನು ಅಗ್ನಿಶಾಮಕ‌ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ(37) ರಕ್ಷಣೆಗೊಳಗಾದವರು. ಟ್ರಕ್‌ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಎಸ್.ಪಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಲಾರಿ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಡಿಸಿ ಲಕ್ಷ್ಮಿಪ್ರಿಯಾ ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದರು.


Nk Channel Final 21 09 2023