ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2024ನೇ ಸಾಲಿನ “ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ” ಇದೇ ನ.17ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಆರ್.ಎಲ್ ಭಟ್ ವಾರಿಜಾಕ್ಷಿ ಆರ್. ಭಟ್ ಗೌರವಾರ್ಥ ವ್ಯವಸ್ಥೆಗೊಳಿಸಿದ ಪ್ರಸಾಧನ ಕೊಠಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷ ವಿದ್ಯಾಪೋಷಕ್ ನ 75 ವಿದ್ಯಾರ್ಥಿಗಳಿಗೆ 6.42 ಲಕ್ಷ ರೂ. ಮೊತ್ತದ ಸಹಾಯಧನವನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ 23 ಮಂದಿ ಹಿರಿಯ ಕಲಾವಿದರಿಗೆ ತಲಾ 20 ಸಾವಿರ ನಗದು ಪುರಸ್ಕಾರ ಪ್ರಶಸ್ತಿ, ತೆಕ್ಕಟ್ಟೆಯ ಕೊಮೆ ಯಶಸ್ವಿ ಕಲಾವೃಂದ ಸಂಸ್ಥೆಗೆ 1 ಲಕ್ಷ ರೂ. ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಸುದೇವ ಸಾಮಗರ 30 ಪ್ರಸಂಗಗಳ ‘ಯಕ್ಷ ರಸಾಯನ’ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಇತ್ತೀಚೆಗೆ ನಿಧನ ಹೊಂದಿದ ಮೂರು ಮಂದಿ ಕಲಾವಿದರ ಕುಟುಂಬಿಕರಿಗೆ ಸಾಂತ್ವನ ನಿಧಿಯನ್ನು ನೀಡಲಾಗುವುದು. ಸಭಾಕಾರ್ಯಕ್ರಮದ ಮೊದಲು ಮಧ್ಯಾಹ್ನ 1.45ರಿಂದ ನವರಸಾಯನೆ: ಯಕ್ಷಗಾಯನ ಹಾಗೂ ಸಮಾರಂಭದ ಬಳಿಕ ಸಂಜೆ 5 ರಿಂದ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ಬಭ್ರುವಾಹನ ಕಾಳಗ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್, ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ನಿರಂಜನ್ ಭಟ್ ಇದ್ದರು.