ಉಡುಪಿ: ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ಅನ್ಯಾಯ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನ ಪಡೆದ ಬಳಿಕ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿಯಾಗಿ ದೇವರ ಸನ್ನಿಧಿಯಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಯಾರು ಅರ್ಹ ಫಲಾನುಭವಿಗಳಿದ್ದರೆ ಅವರೆಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ. ಯಾರಿಗೂ ಅನ್ಯಾಯ ಆಗಲು ಬಿಡಲ್ಲ ಎಂದರು.
ಐದು ಗ್ಯಾರಂಟಿ ಜಾರಿ ನೋಡಿಕೊಳ್ಳಲು ತಾಲೂಕು ಸಮಿತಿಗಳಿವೆ. ರಾಜ್ಯಮಟ್ಟದ ಸಮಿತಿ ಕೂಡ ಇದೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ಯಾರು ಭಯಪಡಬೇಕಾಗಿಲ್ಲ ಎಂದು ಹೇಳಿದರು.
ಚುನಾವಣೆಗೆ ಮುಂಚಿತವಾಗಿ ದೇವಸ್ಥಾನಕ್ಕೆ ಬಂದಿದ್ದೆವು. ದೇವರಿಗೆ ಸಲ್ಲಿಸಿದ ಪ್ರಾರ್ಥನೆಯಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೆವು. ಐದು ಗ್ಯಾರೆಂಟಿ ಕೊಡಲು, ಆಡಳಿತ ಮಾಡಲು ತಾಯಿ ಮೂಕಾಂಬಿಕೆ ಅವಕಾಶ ಕೊಟ್ಟಿದ್ದಾಳೆ. ಇಡಗುಂಜಿ ಗಣಪತಿ, ಮುರುಡೇಶ್ವರ ಶಿವನ ದರ್ಶನ ಮಾಡುತ್ತೇನೆ. ಫಲಿತಾಂಶದ ಬಗ್ಗೆ ಯಾವುದೇ ಯೋಚನೆ ಇಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ. ಎಲ್ಲಾ ಕಡೆ ದೇವರು ಒಳ್ಳೇದು ಮಾಡುತ್ತಾನೆ ಎಂಬ ನಂಬಿಕೆ ಇದೆ ವಿಶ್ವಾಸ ಇದೆ ಎಂದರು.