ಉಡುಪಿ: ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಇದೇ ಫೆ.9ರಂದು ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿಎ ಆಚಾರ್ಯ ಮಣಿಪಾಲ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2024-25ನೇ ಸಾಲಿನ ವಿದ್ಯಾರ್ಥಿವೇತನಕ್ಕೆ 205 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, 9.15 ರೂ. ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಗುವುದು.
ಅಂದು 10 ಗಂಟೆಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧಾರವಾಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ್ ಭಾಗವಹಿಸಲಿದ್ದಾರೆ ಎಂದರು.
ಈ ಬಾರಿ ಮೂಡಿಗೆರೆ ಮೂಲದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ ಪುಷ್ಪಾ ಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಮಂಗಳೂರು ವಿವಿಯ 2022-23ನೇ ಸಾಲಿನಲ್ಲಿ ಎಂ.ಕಾಂ. ಪರೀಕ್ಷೆಯಲ್ಲಿ ದ್ವಿತೀಯ ರ‌್ಯಾಂಕ್ ಗಳಿಸಿರುವ ಪ್ರೀತಿ ಎಂ. ಅಂಬಲಪಾಡಿ ಅವರನ್ನು ಗೌರವಿಸಲಾಗುವುದು.
ಅಲ್ಲದೆ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ವಿಜ್ಞಾನಿ ಡಾ. ಸದಾನಂದ ಆಚಾರ್ಯ ಬೈಕಾಡಿ, ಉಡುಪಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ. ರಾಘವೇಂದ್ರ ಆಚಾರ್ಯ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಸಂಶೋಧಕಿ ಡಾ. ರಂಜಿತಾ ಅಭಿನಂದಿಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾವಿದ ಮಹೇಶ್ ಆಚಾರ್ಯ ಮರ್ಣೆ ಅವರ ಕಲಾಕೃತಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಮಹಾಲಸಾ ಕಲಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್.ಎಸ್. ಪತ್ತಾರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30ರ ವರೆಗೆ ಸಾರ್ವಜನಿಕರಿಗೆ ಚಿತ್ರಕಲಾ ಪ್ರದರ್ಶನವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ವಸಂತ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ಪ್ರೊ. ಭಾಸ್ಕರ ಆಚಾರ್ಯ ಕುರ್ಕಾಲು, ನಿಕಟಪೂರ್ವ ಅಧ್ಯಕ್ಷ ಡಾ. ದಾಸ ಆಚಾರ್ಯ, ಸದಸ್ಯ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು.