ಉಡುಪಿ: ದೇವಲೋಕದಲ್ಲಿ ವ್ಯವಹರಿಸುವುದು ಸಂಸ್ಕೃತ ಭಾಷೆಯಲ್ಲಿ ಮಾತ್ರ. ಸಂಸ್ಕೃತ ದೇವ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲ್ಲ. ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಲೇಬೇಕು. ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜನ್ಮಾಷ್ಟಮಿ ಸಮಾರೋಪ ಕಾರ್ಯಕ್ರಮ ನಡೀತು. ಈ ವೇಳೆ ಸಂಸ್ಕೃತ ಭಾಷೆಯಲ್ಲಿ ಮಾತನಾಡಿರುವ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು. ಸಂಸ್ಕೃತ ವಿಶ್ವಭಾಷೆ, ಪವಿತ್ರ.. ಶ್ರೇಷ್ಠ.. ಪಾವನ ಎಂದರು.
ಕೇವಲ ಭಾರತೀಯ ಭಾಷೆಗಳಿಗೆ ಮಾತ್ರ ಸಂಸ್ಕೃತ ಮೂಲವಲ್ಲ. ಆಂಗ್ಲ ಭಾಷೆಗಳಿಗೂ ಮೂಲ ಸಂಸ್ಕೃತವೇ. ಪಿತಾದಿಂದ ಫಾದರ್.. ಮಾತಾದಿಂದ ಮದರ್ ಹುಟ್ಟಿಕೊಂಡಿದೆ. ಸಮಗ್ರವೂ ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ. ಸಂಸ್ಕೃತ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳು ಪ್ರಾದೇಶಿಕ ಭಾಷೆಗಳಾಗಿವೆ ಎಂದಿದ್ದಾರೆ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾಡಿರುವ ಈ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. ಸ್ವಾಮೀಜಿಯ ಹೇಳಿಕೆಗಳಿಗೆ ವಿರೋಧವೂ ವ್ಯಕ್ತವಾಗುತ್ತಿದೆ.