Bengaluru 21°C

ಉಪ್ಪಿನಕುದ್ರು ಪ್ರೌಢಶಾಲೆಯ ಮುಖ್ಯಶಿಕ್ಷಕಿಗೆ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ

ಉಪ್ಪಿನಕುದ್ರು ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿ ಮಾಲತಿ ವಿ ಅವರಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿರುವ ಎಸ್ ಡಿಎಂಸಿ ಅಧ್ಯಕ್ಷ ಹಾಗೂ ಸಹಶಿಕ್ಷಕಿ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ತಾಲೂಕು ಸಮಿತಿ ವತಿಯಿಂದ ಕುಂದಾಪುರ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉಡುಪಿ: ಉಪ್ಪಿನಕುದ್ರು ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿ ಮಾಲತಿ ವಿ ಅವರಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿರುವ ಎಸ್ ಡಿಎಂಸಿ ಅಧ್ಯಕ್ಷ ಹಾಗೂ ಸಹಶಿಕ್ಷಕಿ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ತಾಲೂಕು ಸಮಿತಿ ವತಿಯಿಂದ ಕುಂದಾಪುರ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಅವರು, ಉಪ್ಪಿನಕುದ್ರು ಪ್ರೌಢ ಶಾಲೆಯಲ್ಲಿ ದಲಿತ ಮುಖ್ಯಶಿಕ್ಷಕಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿ ಅವರ ಮೇಲೆ ದೌರ್ಜನ್ಯವೆಸಗಿರುವುದು ಅಕ್ಷಮ್ಯ. ದಲಿತರ ರಕ್ಷಣೆಗೆ ಧಾವಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೇಲ್ಜಾತಿಯವರ ಪರ ನಿಂತಿರುವುದು ನಾಚಿಕೆಗೇಡು. ಜಿಲ್ಲಾಡಳಿತಕ್ಕೆ ದಲಿತರ ರಕ್ಷಣೆ ಮಾಡಲು ಯೋಗ್ಯತೆ ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿರುವ ಶಾಲೆಯಲ್ಲಿ ದಲಿತ ಮುಖ್ಯ ಶಿಕ್ಷಕಿ ಇರಬಾರದೆಂಬ ಉದ್ದೇಶದಿಂದ ಕಳೆದ ಆರು ತಿಂಗಳುಗಳಿಂದ ಅವರ ವಿರುದ್ಧ ಷಡ್ಯಂತರಗಳನ್ನು ನಡೆಸುತ್ತಲೇ ಬಂದಿದ್ದಾರೆ. ಶತಮಾನೋತ್ಸವ ಸಂಭ್ರಮದ ವೇದಿಕೆಯ ಮೇಲೆ ಮೇಲ್ಜಾತಿಯವರಿಗೆ ಸರಿಸಮಾನವಾಗಿ ದಲಿತ ಶಿಕ್ಷಕಿ ಕೂರಬಾರದೆಂಬ ಹಿಡೆನ್ ಅಜೆಂಡಾ ಇಟ್ಟುಕೊಂಡು ಈ ಎಲ್ಲಾ ಗೊಂದಲಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಎಸ್ಡಿಎಂಸಿ ಹಾಗೂ ಸಹಶಿಕ್ಷಕಿಯ ಪರ ನಿಂತಿರುವುದು ಖಂಡನೀಯ ಎಂದರು.


ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರತಿಭಟನಾನಿರತರೊಂದಿಗೆ ಕೂತು ಅಹವಾಲು ಆಲಿಸಿದರು. ನೊಂದ ದಲಿತ ಶಿಕ್ಷಕಿ ಮಾಲತಿ ವಿ ಅವರೊಂದಿಗೆ ಮಾತುಕತೆ ನಡೆಸಿ ಹದಿನೈದು ದಿನಗಳೊಳಗೆ ಗೊಂದಲಗಳನ್ನು ಬಗೆಹರಿಸುವಂತೆ ಭರವಸೆ ನೀಡಿದರು. ಬಳಿಕ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನಾನಿರತರ ಅಹವಾಲು ಆಲಿಸಿದರು.


ಜಿಪಂ ಸಿಇಒ ಪ್ರತೀಕ್ ಬಾಯಲ್ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಭರವಸೆಯ ಬಳಿಕ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ದಸಂಸ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಮುಖಂಡರಾದ ವಿಜಯ್ ಕೆಎಸ್, ಚಂದ್ರಮ ತಲ್ಲೂರು, ಮಂಜುನಾಥ ಗುಡ್ಡೆಯಂಗಡಿ, ರಾಘವೇಂದ್ರ ಬೈಂದೂರು, ಶಶಿ ಬಳ್ಕೂರು, ರಾಮ ಬೆಳ್ಳಾಲ, ವಸಂತ ವಂಡ್ಸೆ ಇದ್ದರು.


Nk Channel Final 21 09 2023