ಉಡುಪಿ: ಕಾರ್ಮಿಕರ ಸೇವೆಯನ್ನು ಪಡೆಯಲು ಕೆಲಸಗಾರರನ್ನು ನಿಯೋಜಿಸಿಕೊಳ್ಳುವ ಪ್ರತಿಯೊಬ್ಬ ಮಾಲೀಕರು ಅವರ ಗುರುತಿನ ಚೀಟಿ, ಶಾಶ್ವತ ಹಾಗೂ ತಾತ್ಕಲಿಕ ವಾಸ ಸ್ಥಾನದ ವಿವರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ವಿವರಗಳನ್ನು ಸಂಬಂಧಿಸಿದ ಸರ್ಕಾರಿ ಕಛೇರಿಗಳಿಗೆ ತಪ್ಪದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಕ್ರಮ ಬಾಂಗ್ಲಾದೇಶೀಯ ವಲಸೆ ಕಾರ್ಮಿಕರಿಗೆ ಹಾಗೂ ನಾಗರೀಕರಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ ಮೂಲಕ ಜಿಲ್ಲೆಯ ಜನರನ್ನು ಜಾಗೃತಗೊಳಿಸುವ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶದ ನಾಗರಿಕರು ಜೀವನೋಪಾಯಕ್ಕಾಗಿ ಕಾರ್ಮಿಕರು ಜಿಲ್ಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ.
ಅಲ್ಲದೇ ಸ್ಥಳೀಯವಾಗಿ ಕೆಲವು ದಾಖಲೆಗಳನ್ನು ಸೃಷ್ಠಿಸಿಕೊಂಡು ಕಾನೂನು ಬಾಹಿರವಾಗಿ ವಾಸವಿದ್ದರೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಚ್ಚರ ವಹಿಸಲು ನಿರ್ದೇಶನ ನೀಡಿದೆ. ಕಾರ್ಮಿಕ, ಕೈಗಾರಿಕೆ, ಮೀನುಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರು ಸಹ ಇದಕ್ಕೆ ಸಹಕರಿಸಬೇಕು ಎಂದರು.
ಮೀನುಗಾರಿಕೆ ಚಟುವಟಿಕೆ, ಕಟ್ಟಡಗಳ ನಿರ್ಮಾಣ ಸಂಸ್ಥೆಗಳು, ದೊಡ್ಡ ರೈತರು, ಅಪಾರ್ಟ್ಮೆಂಟ್ ನವರು ಸೇರಿದಂತೆ ಮತ್ತಿತರ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬ ಮಾಲೀಕರು ತಮ್ಮಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿರುವ ಕಾರ್ಮಿಕರ ಆಧಾರ್ ಸೇರಿದಂತೆ ಮತ್ತಿತರ ಅಧೀಕೃತ ಗುರುತಿನ ಚೀಟಿಯನ್ನು ತಪ್ಪದೇ ಪಡೆಯಬೇಕು. ಇವುಗಳ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದ ಅವರು ಅಧಿಕಾರಿಗಳು ಇವುಗಳನ್ನು ಪಡೆದ ನಂತರ ಪರಿಶೀಲನೆ ಮಾಡಬೇಕು ಇವುಗಳ ಜೋತೆಗೆ ಆಗ್ಗಿಂದಾಗ್ಗೆ ಅವರುಗಳು ಕೆಲಸ ನಿರ್ವಹಿಸುವ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ಮಾಡಿ ತಪಾಸಿಸಬೇಕು ಎಂದರು.
ಹೊರ ರಾಜ್ಯಗಳಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಕಾನೂನು ಬಾಹಿರವಾಗಿ ಮೀನುಗಾರಿಕೆ ಬೋಟ್‌ಗಳು ಬಂದಂತಹ ಸಂದರ್ಭದಲ್ಲಿ ಕಾನೂನಿನ ಅನ್ವಯ ಅವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ಮಾಡುವುದನ್ನು ತಪ್ಪಿದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಮನೆಯ ಮಾಲೀಕರುಗಳು ತಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದ ಅವರು, ಕಾರ್ಮಿಕ, ಉದ್ಯೋಗ ಪರ ಸಂಘಟನೆಗಳು ಸಹ ಅಕ್ರಮ ವಿದೇಶಿ ವಲಸಿಗರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಮೀನುಗಾರಿಕಾ ಬಂದರುಗಳಲ್ಲಿ ನಿಗಧಿತ ಸೂಕ್ತ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಗಳನ್ನು ಆಳವಡಿಸಬೇಕು ಎಂದು ಬಂದರು ಹಾಗೂ ಸಿ.ಆರ್.ಝೆಡ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ಕೆಲಸ ಕಾರ್ಯಗಳಿಗೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಮೊದಲು ಅವರುಗಳ ಪೂರ್ವಪರ ಮಾಹಿತಿ ಹಾಗೂ ಅವರ ಗುರುತಿನ ಚೀಟಿಯನ್ನು ಪಡೆದುಕೊಳ್ಳುವುದರ ಜೊತೆಗೆ ದಾಖಲೆಗಳ ಪರಿಶೀಲಿಸಿಕೊಳ್ಳಬೇಕು. ಒಂದೊಮ್ಮೆ ಕಾನೂನು ಬಾಹಿರ ವ್ಯಕ್ತಿಗಳನ್ನು ಕೆಲಸಕ್ಕೆ ತೊಡಗಿಸಿಕೊಂಡ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕರ ಜೊತೆಗೆ ನೇಮಿಸಿಕೊಂಡ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಆಧಾರ್ ಕಾರ್ಡ್ನ ಮೂಲದ ಕುರಿತು ಪರಿಶೀಲನೆ ಮಾಡುವ ಬಗ್ಗೆ ಪ್ರಯೋಗಿಕ ತರಬೇತಿ ನೀಡಲಾಯಿತು. ಸಭೆಯಲ್ಲಿ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ವಿವಿಧ ಸಂಘಟಣೆಗಳ-ಸAಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.