ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೇವರಿಗೆ ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ.
ವ್ಯಾಪಾರ ಚಟುವಟಿಕೆ ಚುರುಕುಗೊಂಡಿದ್ದು, ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ರಥಬೀದಿ, ಸರ್ವಿಸ್ ಬಸ್ ನಿಲ್ದಾಣ, ಆದಿ ಉಡುಪಿ, ಕೆ.ಎಂ. ಮಾರ್ಗ, ಚಿತ್ತರಂಜನ್ ವೃತ್ತ, ಮಣಿಪಾಲ ಮೊದಲಾದ ಕಡೆ ಟೆಂಟ್ ಹಾಕಿ ಕೇದಗೆ, ಸಿಂಗಾರ ಹೂವು, ಸೀಯಾಳ, ಕೆಂದಾಳೆ ಮಾರಾಟದಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ನಾಗದೇವರಿಗೆ ಪ್ರಿಯವಾಗಿರುವ ಹಿಂಗಾರ, ಅರಿಶಿಣ ಎಲೆ, ಕೇದಗೆ ಹೂ ಬೇಡಿಕೆ ಹೆಚ್ಚಿದೆ.
ಈ ವರ್ಷ ವರುಣ ಪ್ರತಾಪ ತೋರುತ್ತಿರುವ ಹಿನ್ನೆಲೆಯಲ್ಲಿ ಹೂವಿನ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಹಬ್ಬಗಳ ಸಮಯ ಹೊರತುಪಡಿಸಿದರೆ, ವರ್ಷವಿಡೀ ಎಲ್ಲ ಬಗೆಯ ಹೂಗಳ ದರ ಒಂದು ಮಾರಿಗೆ ಸರಾಸರಿಗಿಂತ ಕಡಿಮೆ ಇರುತ್ತದೆ. ಆದರೆ ಈ ವರ್ಷ ಹೂವಿನ ಇಳುವರಿ ಕಡಿಮೆಯಾಗಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ. ಸೇವಂತಿಗೆ , ಮಲ್ಲಿಗೆ ,ಕನಕಾಂಬರ, ಜಾಜಿ ಮಲ್ಲಿಗೆ, ಹಿಂಗಾರ, ಗುಲಾಬಿ, ಕಾಕಡ, ಹೂಗಳ ದರ ದುಬಾರಿಯಾಗಿದೆ.
ಶಂಕರಪುರ ಮಲ್ಲಿಗೆ 2,100 ರಿಂದ 2400 ದರ ತಲುಪಿದ್ದು ಗ್ರಾಹಕರು ಮಲ್ಲಿಗೆಯನ್ನು ಮುಟ್ಟುವಂತಿಲ್ಲ. ಅದೇ ರೀತಿ ಸಿಂಗಾರ, ಇನ್ನಿತರ ಹೂಗಳ ದರ ಏರಿಕೆಯಾಗಿದೆ.
ಅದೇ ರೀತಿ ಸೀಯಾಳ ದರ ಕೂಡ 50 ರಿಂದ 60 ರೂಪಾಯಿಗೆ ಏರಿಕೆಯಾಗಿದೆ.