ಉಡುಪಿ: ಪೊಲೀಸ್ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪೊಲೀಸ್ ಶ್ವಾನ “ಐಕಾನ್” ಹಲವು ಹೆಗ್ಗಳಿಕೆಯನ್ನು ಹೊಂದಿದೆ. ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಶ್ವಾನ 2014ರ ನವೆಂಬರ್ 5ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿತ್ತು.
ಬೆಂಗಳೂರಿನ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆಯಲ್ಲಿ 9 ತಿಂಗಳು ಕಠಿಣ ತರಬೇತಿಯನ್ನು ಇದು ಪಡೆದಿತ್ತು. ಈತನಕ ಉಡುಪಿ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸುಮಾರು 417 ಕ್ಕಿಂತ ಅಧಿಕ ವಿಶೇಷ ಕರ್ತವ್ಯ ನಿರ್ವಹಿಸಿದೆ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ ಗಣ್ಯಾತಿಗಣ್ಯರ ಆಗಮನದ ಸಂದರ್ಭದಲ್ಲಿ ಹಾಗೂ ಏರ್ ಶೋ, ಜಿ-20 ಶೃಂಗಸಭೆ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭ ಐಕಾನ್ ಕರ್ತವ್ಯ ನಿರ್ವಹಿಸಿದೆ.
ಕಳೆದ 10 ವರ್ಷ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇದರದ್ದು. ಫೆಬ್ರವರಿ 22, 2020 ರಂದು ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿಯ ಪದಕ ಪಡೆದು ಪೊಲೀಸ್ ಇಲಾಖೆಗೆ ಗೌರವವನ್ನು ತಂದುಕೊಟ್ಟಿತ್ತು. 10 ವರ್ಷಗಳಿಂದ ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಐಕಾನ್ ಇತ್ತೀಚೆಗೆ ನಿವೃತ್ತಿ ಆದಾಗ ಜಿಲ್ಲಾ ಪೊಲೀಸರು ಗೌರವ ಸಲ್ಲಿಸಿದರು.