ಉಡುಪಿ: ಕಲ್ಜಿಗ ಸಿನಿಮಾದಲ್ಲಿ ಬರುವ ಕೊರಗಜ್ಜ ದೈವದ ದರ್ಶನದ ದೃಶ್ಯಕ್ಕೆ ನಮ್ಮ ವಿರೋಧವೇ ವಿನಾಃ ಕಲ್ಜಿಗ ಸಿನಿಮಾಕ್ಕೆ ನಮ್ಮ ವಿರೋಧವಿಲ್ಲ ಎಂದು ಮಂಗಳೂರು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆಯ ಸಹನಾ ಕುಂದರ್ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾದ ನಾಯಕ ನಟ, ನಿರ್ದೇಶಕ ಅಥವಾ ಇನ್ನುಳಿದ ಯಾವುದೇ ನಟ, ತಂತ್ರಜ್ಞರ ಬಗ್ಗೆ ಟಾರ್ಗೆಟ್ ಇಲ್ಲ. ಯಾರನ್ನೂ ನಾವು ಟೀಕೆ ಕೂಡ ಮಾಡ್ತಿಲ್ಲ. ಸಿನಿಮಾದಲ್ಲಿ ಬರುವ ಹತ್ತು ನಿಮಿಷದ ಕೊರಗಜ್ಜ ದೈವದ ದೃಶ್ಯವನ್ನು ತೆಗೆಯುವಂತೆ ಮನವಿ ಮಾಡುತ್ತೇವೆ ಎಂದರು.
ಸಿನಿಮಾದಲ್ಲಿ ದೈವದ ದೃಶ್ಯ ಅನಗತ್ಯ, ಇದರ ಅಗತ್ಯವು ಇಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ದೈವರಾಧನೆಯನ್ನು ಬೇರೆ ರೀತಿಯಲ್ಲೂ ತೋರಿಸಬಹುದಿತ್ತು. ಓರ್ವ ಡೈರೆಕ್ಟರ್ ಆದವನಿಗೆ ಸೃಜನಶೀಲತೆ ಬೇಕು. ಅದನ್ನು ಹೇಗೆ ಬೇಕಾದರೂ ತೋರಿಸಬಹುದಿತ್ತು. ಒಬ್ಬ ಹುಡುಗನಿಗೆ ವೇಷಭೂಷಣ ತೊಡಿಸಿ ಮಾಡಬೇಕಂತಾ ಇರಲಿಲ್ಲ ಎಂದು ಹೇಳಿದರು. ತುಳುನಾಡಿನಲ್ಲಿ ದೈವಾರಾಧನೆಗೆ ವಿಶೇಷವಾದ ಆರಾಧನಾ ಕ್ರಮವಿದೆ. ಅದಕ್ಕೆ ದಕ್ಕೆ ತರುವ ಕೆಲಸ ಯಾರಿಂದಲೂ ಆಗಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ದಿಲ್ ರಾಜ್ ಆಳ್ವ, ಭರತ್ ರಾಜ್ ಇದ್ದರು.