ಉಡುಪಿ: ಹೆಬ್ರಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ಹುಟ್ಟೂರು ಕೂಡ್ಲುವಿನಲ್ಲಿ ನೆರವೇರಿತು. ಇದಕ್ಕೂ ಮುನ್ನ ಮಣಿಪಾಲದಿಂದ ಅಂಬುಲೆನ್ಸ್‌ನಲ್ಲಿ ಕೂಡ್ಲುವಿಗೆ ಶವ ರವಾನೆ ಮಾಡಲಾಯಿತು.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲು ಗ್ರಾಮದ ಮನೆ ಆವರಣದಲ್ಲಿ ಚಿತೆಗೆ ವಿಕ್ರಂ ಗೌಡ ಸಹೋದರ ಸುರೇಶ್ ಗೌಡ ಬೆಂಕಿಇಟ್ಟರು. ಕೂಡ್ಲು ಗ್ರಾಮದಲ್ಲಿ ವಿಕ್ರಂ ಗೌಡ ಕುಟುಂಬಕ್ಕೆ ಸೇರಿದ ಒಂದು ಎಕರೆ ಭೂಮಿ ಇದೆ. ಇದೇ ಜಮೀನಿನಲ್ಲಿ ಸಹೋದರ, ತಂಗಿ ಮತ್ತು ನಿಕಟ ಬಂಧುಗಳು ಮತ್ತು ಊರಿನ ಪ್ರಮುಖರ ಸಮಕ್ಷಮದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ವಿಕ್ರಂ ಗೌಡ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ತೀರ್ಥ ಪ್ರಾಶನ ಮಾಡಿದರು. ಬಳಿಕ ಅಂತಿಮವಾಗಿ ಕುಟುಂಬಸ್ಥರಿಗೆ ಮುಖದರ್ಶನ ಮಾಡಿಸಲಾಯಿತು. 21 ವರ್ಷಗಳ ಹಿಂದೆ ವಿಕ್ರಂ ಗೌಡನನ್ನು ಗ್ರಾಮಸ್ಥರು ನೋಡಿದ್ದರು. ಬಳಿಕ ನೋಡಿರಲಿಲ್ಲ. ವಿಕ್ರಂ ಗೌಡ ಬಗ್ಗೆ ಊರವರಿಗೆ ಪ್ರೀತಿಯಿದ್ದರೂ, ಆತನ ಸಶಸ್ತ್ರ ಹೋರಾಟದ ಬಗ್ಗೆ ಆಕ್ಷೇಪಗಳಿದ್ದವು.