ಉಡುಪಿ: ಉಡುಪಿ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಬುಡೋಕಾನ್ ಕರಾಟೆ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ‘4ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್’ ಅನ್ನು ನ.16 ಮತ್ತು 17ರಂದು ಉಡುಪಿ ಶ್ರೀಕೃಷ್ಣಮಠದ ಮಧ್ವಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಿವಕುಮಾರ್ ಅಂಬಲಪಾಡಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಮಠಾಧೀಶರಾದ ಸುಶೀಂದ್ರತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ.
ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಶಸ್ತಿ ಅನಾವರಣ ಮಾಡಲಿದ್ದಾರೆ. ನ.17ರಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.