ಉಡುಪಿ: ಭಾರತದ ಪ್ರಖ್ಯಾತ ಗಾಯಕ, ದಕ್ಷಿಣಾದಿ ಸಂಗೀತದ ದಿಗ್ಗಜ, ಸಂಗೀತ ಮಾಂತ್ರಿಕ ಯೇಸುದಾಸ್ ಇಂದು 85ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಆಚರಿಸಿಕೊಂಡು ಬರುತ್ತಿದ್ದರು.
ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಕಾರಣ ಕೋವಿಡ್ ಮಹಾಮಾರಿ ಸೋಂಕಿನ ನಂತರ ತನ್ನ ಈ ಪರಿಪಾಠವನ್ನು ನಿಲ್ಲಿಸಿದ್ದರು. ಸ್ವರಮಾಂತ್ರಿಕನ ಅಭಿಮಾನಿಗಳು ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ದೇವರ ಸ್ತುತಿಯನ್ನು ಹಾಡುವ ಮೂಲಕ ನೆಚ್ಚಿನ ಕಲಾವಿದನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಇಂದು ಕೂಡ ಹಲವಾರು ಕಲಾವಿದರು ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ಪದ್ಮವಿಭೂಷಣ ಯೇಸುದಾಸ್ ಅವರ ಹುಟ್ಟುಹಬ್ಬವನ್ನು ಸಂಗೀತ ಸೇವೆಯ ಮೂಲಕ ಆಚರಿಸಿದರು. ಯೇಸುದಾಸ್ ಹೆಸರಲ್ಲಿ ದೇವರಿಗೆ ವಿಶೇಷ ಪೂಜೆ, ಸೇವೆಗಳು ಸಲ್ಲಿಕೆಯಾದವು.