Bengaluru 27°C

ಮೈಕ್ರೋಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಕಡ್ಡಾಯ ಪಾಲಿಸಬೇಕು: ಡಿಸಿ ವಿದ್ಯಾಕುಮಾರಿ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಾಲಕಾಲಕ್ಕೆ ನೀಡುವ ಎಲ್ಲಾ ಮಾರ್ಗ ಸೂಚಿಗಳು ಹಾಗೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಡಿಸಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಾಲಕಾಲಕ್ಕೆ ನೀಡುವ ಎಲ್ಲಾ ಮಾರ್ಗ ಸೂಚಿಗಳು ಹಾಗೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಡಿಸಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೈಕ್ರೋ ಫೈನಾನ್ಸ್‌ಗಳಿಂದ ಆದಾಯ ಸಾಮರ್ಥ್ಯ ಮೀರಿ, ಮೂರ್ನಾಲ್ಕು ಬಾರಿಯೂ ಸಾಲ ಪಡೆದವರಿದ್ದು ಸಾಲ ಕೊಡುವವರು ಹಾಗೂ ಪಡೆದವರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ ಈ ಮೊದಲಿದ್ದ 120ಕ್ಕೂ ಅಧಿಕ ಸಂಸ್ಥೆಗಳ ಪೈಕಿ ಹಲವು ಮುಚ್ಚಿದ್ದು ಸಭೆಗೆ 25 ಜನರಷ್ಟೇ ಬಂದಿದ್ದಾರೆ. ಕಾನೂನು ಬದ್ಧ ವ್ಯವಹಾರದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.


ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತಿದೆ. 2024ರಲ್ಲಿ ಎಂಟು ದೂರುಗಳು ಸಾಲ ವಸೂಲಿ ಹಿಂಸೆ ಹಾಗೂ 9 ದೂರುಗಳು ಸಾಲಗಾರರಿಂದ ಸಾಲ ವಸೂಲಿ ಮಾಡಿ ಕೊಡುವಂತೆ ಬಂದಿದ್ದು ಎರಡು ಎಫ್‌ಐಆರ್ ದಾಖಲಾಗಿವೆ ಎಂದರು.


ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್‌ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶ ವಿದೆ. ಸಾಲ ಮರುಪಾವತಿ ಯ ಕುರಿತಂತೆ ಕಾನೂನಿನ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನನ್ನು ಉಲ್ಲಂಘಿಸಿ, ದೌರ್ಜನ್ಯ, ಕೆಟ್ಟ ಪದಗಳಲ್ಲಿ ಬೈಯುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಸೊಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದವರು ಎಚ್ಚರಿಸಿದರು.


ಅದೇ ರೀತಿ ಸಾಲ ನೀಡಿದ ಫೈನಾನ್ಸ್‌ಗಳ ವಿರುದ್ಧ ತಿರುಗಿ ಬೀಳುವುದು ಅಥವಾ ಸಾಲ ಪಡೆದವರ ಮೇಲೆ ಫೈನಾನ್ಸ್‌ ಗಳು, ಕಾನೂನು ಉಲ್ಲಂಘಿಸಿ ತಿರುಗಿ ಬಿದ್ದಲ್ಲಿ ಅಂತಹವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಸಂಬಂಧಿತ ಕಿರುಕುಳ ದೂರುಗಳನ್ನು ಕಂಟ್ರೋಲ್ ರೂಂ ಸಂಖ್ಯೆ: 0820-2574802ಕ್ಕೆ ಕಚೇರಿ ವೇಳೆಯಲ್ಲಿ ದೂರು ನೀಡಬಹುದು ಎಂದರು.


ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳಲ್ಲಿ ತೆಗೆದುಕೊಳ್ಳುವ, ಕೊಡುವ ವ್ಯವಹಾರಗಳು ಶಾಂತಿಯುತವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9 ಕ್ಕೂ ಮುನ್ನ ಸಂಜೆ 6ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು. ಒಂದೊಮ್ಮೆ ಉಲ್ಲಂಘಿಸಿದ್ದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.


Nk Channel Final 21 09 2023