ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭವು ನ. 29, 30 ಹಾಗೂ ಡಿಸೆಂಬರ್ 1 ರಂದು ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 29ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಟಿ. ಮೋಹನದಾಸ ಪೈ ಮೆಮೋರಿಯಲ್ ‘ಅಮೃತ ಸೌಧ’ವನ್ನು ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಟಿ. ಸತೀಶ್ ಯು ಪೈ. ಉದ್ಘಾಟಿಸಲಿದ್ದಾರೆ. ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಮಧ್ಯಾಹ್ನ 12 ಗಂಟೆಗೆ ಆಡಳಿತ ಮಂಡಳಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ 2 ಗಂಟೆಗೆ ವಿಶ್ರಾಂತ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 5.30 ರಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದ ವತಿಯಿಂದ ‘ವೀರ ವೃಷಸೇನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ನ.30ರಂದ ಬೆಳಿಗ್ಗೆ ಶೋಭಾಯಾತ್ರೆ ನಡೆಯಲಿದ್ದು, ಬೆಳಿಗ್ಗೆ 8:15ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಜ್ಯೋತಿ ಹಸ್ತಾಂತರಿಸಲಿದ್ದಾರೆ. 9 ಗಂಟೆಗೆ ಗಾಂಧಿ ಮೈನ್ ಸ್ಕೂಲ್ ನಲ್ಲಿ ಡಾ.ರಂಜನ್ ಆರ್.ಪೈ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಶೋಭಾಯಾತ್ರೆಯು ಎಂಜಿಎಂ ಕಾಲೇಜಿನವರೆಗೆ ಸಾಗಿ ಬರಲಿದೆ.
ಬೆಳಗ್ಗೆ 11.30ಕ್ಕೆ ‘ಎಂಜಿಎಂ ನೆನಪು’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಎಂಜಿಎಂ ಕಾಲೇಜು ನಡೆದು ಬಂದ ದಾರಿಯ ಕುರಿತಾಗಿ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 1.30ರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 5.30ರಿಂದ ಮುಂಬೈಯ ‘ಊರ್ಜಾ’ ವಾದ್ಯವೃಂದದಿಂದ ವಾದ್ಯಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಿ.1ರಂದು ಬೆಳಿಗ್ಗೆ 9.30ರಿಂದ 11ರವರೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 11 ಗಂಟೆಗೆ ಹಳೆವಿದ್ಯಾರ್ಥಿಗಳ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 2.30ರಿಂದ ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 3.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಗಮಿಸಲಿದ್ದಾರೆ.
ಸಂಜೆ 5.30ರಿಂದ ವಿದ್ಯಾಭೂಷಣ, ಬೆಂಗಳೂರು ಮತ್ತು ಕುಮಾರಿ ಮೇಧಾ ಹಿರಣ್ಯಯಿ, ಬೆಂಗಳೂರು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಜಿಇ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಪ.ಪೂ.ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ ಎ., ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ಎಸ್. ನಾಯ್ಕ್, ವಿಶ್ವನಾಥ್ ಪೈ, ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಇದ್ದರು.