ಉಡುಪಿ: ಉಡುಪಿಯ ಮಹಾಲಕ್ಷ್ಮೀ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಪ್ರಕರಣ ಇಂದು ದೇವಸ್ಥಾನದ ಅಂಗಳ ತಲುಪಿದೆ. ಉಡುಪಿಯ ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನದಲ್ಲಿ ಇಂದು ಆಣೆ ಪ್ರಮಾಣಕ್ಕೆ ದಿನ ನಿಗದಿಯಾಗಿತ್ತು. ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಮಾಜಿ ಶಾಸಕ ರಘುಪತಿ ಭಟ್ ಅವರು ಆರೋಪ ಮಾಡಿದ್ದರು.
ಆರೋಪಕ್ಕೆ ಪ್ರತಿಯಾಗಿ ಬ್ಯಾಂಕ್ ನ ಅಧಿಕಾರಿ ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದರು. ಈ ಆಹ್ವಾನಕ್ಕೆ ಒಪ್ಪಿದ್ದ ಮಾಜಿ ಶಾಸಕ ರಘುಪತಿ ಭಟ್ ಇಂದು ದಿನ ನಿಗದಿಪಡಿಸಿದ್ದರು. ಅದರಂತೆ ದೇವಸ್ಥಾನಕ್ಕೆ ಬ್ಯಾಂಕ್ ನಲ್ಲಿ ಸಾಲ ಪಡೆದವರ ಜೊತೆ ಮಾಜಿ ಶಾಸಕ ರಘುಪತಿ ಭಟ್ ಆಗಮಿಸಿದರು.
ಮತ್ತೊಂದೆಡೆ ಮಹಾಲಕ್ಷ ಬ್ಯಾಂಕ್ ಅಧಿಕಾರಿಗಳು ಕೂಡ ಆಗಮಿಸಿದರು. ಆದರೆ ಆಣೆ ಪ್ರಮಾಣ ಬದಲು ಎರಡೂ ಕಡೆಯವರು ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನೆರವೇರಿಸಿದರು. ದೇವಸ್ಥಾನದ ಕಡೆಯವರು ಆಣೆ ಪ್ರಮಾಣಕ್ಕೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಒಪ್ಪಿದ ಎರಡೂ ಕಡೆಯವರು ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ತೆರಳಿದರು. ಒಟ್ಟಾರೆ ಮಹಾಲಕ್ಷ್ಮೀ ಬ್ಯಾಂಕ್ ನ ಅವ್ಯವಹಾರ ಆರೋಪ ಈಗ ದೇವಸ್ಥಾನದ ಅಂಗಳ ತಲುಪಿದಂತಾಗಿದ್ದು ಮುಂದೆ ಏನಾಗುತ್ತೋ ಎಂಬುವುದನ್ನು ಕಾದು ನೋಡಬೇಕಿದೆ.