ಉಡುಪಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15ರಂದು 9.30ಕ್ಕೆ ಜಿಲ್ಲೆಯಲ್ಲಿ 100 ಕಿ.ಮೀ. ಉದ್ದದ ಮಾನವ ಸರಪಳಿ ರಚನೆ ಮಾಡಲಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು ಸಹಿತ 1 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಗಡಿಭಾಗವಾದ ಬೈಂದೂರು ಶಿರೂರಿನಿಂದ ಹೆಜಮಾಡಿ ತನಕ ಸರಪಳಿ ಇರಲಿದೆ. ಉಡುಪಿಯ ಕಿನ್ನಿಮೂಲ್ಕಿ ಸ್ವಾಗತಗೋಪುರದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಹಿಡಿದು ಸಂಭ್ರಮಿಸಲಿದ್ದೇವೆ. ಮೊದಲಿಗೆ ಸಂವಿಧಾನ ಪೀಠಿಕೆ ಓದಿ, ಬಳಿಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಸಂದೇಶ ಸಾರಲಾಗುತ್ತದೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದರು.
ಸಂಚಾರದಲ್ಲಿ ಬದಲಾವಣೆ:
ಮಾನವ ಸರಪಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವುದರಿಂದ ಒಂದು ಗಂಟೆ ಕಾಲ ವಾಹನಗಳು ದ್ವಿಪಥದಲ್ಲಿ ಸಂಚರಿಸಲಿವೆ. ಉಡುಪಿಯಿಂದ ಬೈಂದೂರಿಗೆ ಹೋಗುವಾಗ ಚತುಷ್ಪಥ ರಸ್ತೆಯ ಬಲಭಾಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಲ್ಲಿ ಮಾನವ ಸರಪಳಿ ಇರಲಿದೆ. ಸಮರ್ಥವಾಗಿ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಇದನ್ನು ನಿರ್ವಹಿಸಲಿದ್ದು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರತಿ 100 ಮೀಟರ್‌ಗೆ ಓರ್ವ ಸೆಕ್ಷನ್ ಆಫೀಸರ್, ಪ್ರತಿ 1 ಕಿ.ಮೀ.ಗೆ ಓರ್ವ ಏರಿಯಾ ಆಫೀಸರ್, ಪ್ರತಿ 5 ಕಿ.ಮೀ.ಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರ ನಿಯೋಜನೆಯಾಗಿದೆ. ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ, ತುರ್ತು ಸೇವೆಗೆ ಆ್ಯಂಬುಲೆನ್ಸ್ ಕೂಡ ಇರಲಿದೆ. ಜಿಲ್ಲೆಯ ವಿವಿಧ ಸಾಂಪ್ರದಾಯಿಕ ಕಲೆಗಳ ಅನಾವರಣವೂ ನಡೆಯಲಿದೆ. ಡ್ರೋನ್ ಶೂಟಿಂಗ್ ಮಾಡಲಿದ್ದೇವೆ ಎಂದು ತಿಳಿಸಿದರು.