ಉಡುಪಿ: ಭಾರತೀಯರಾಗಿ ನಾವು ಒಗ್ಗಟ್ಟಾಗಿರಬೇಕು. ಪ್ರತಿಯೊಬ್ಬ ಭಾರತೀಯರು ಕನ್ನಡಿಗರಲ್ಲ. ಆದರೆ ಪ್ರತಿಯೊಬ್ಬ ಕನ್ನಡಿಗರು ಭಾರತೀಯರು. ಈ ಚಿಂತನೆ ನಮ್ಮಲ್ಲಿ ಬೆಳೆಯಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಕುಂಜಿಬೆಟ್ಟು ಶಾರಾದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಕರಾವಳಿ ಸಾಹಿತಿಗಳು – ಕಲಾವಿದರು – ಲೇಖಕರು – ಕವಿಗಳು – ಚುಟುಕು ಬರಹಗಾರರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಭಾರತಕ್ಕೆ ಗೌರವ ಕೊಡುತ್ತಾ ನಮ್ಮ ಕನ್ನಡ ಪರಂಪರೆಯನ್ನು ಮುಂದುವರಿಸಬೇಕು. ಕನ್ನಡದ ಅನನ್ಯವಾದ ಪರಂಪರೆಯನ್ನು ಸಂರಕ್ಷಣೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಏಕತೆಗಾಗಿ ಕೆಲಸ ಮಾಡಿತು. ಹಾಗೆಯೇ ಈ ಕಾರ್ಯಕ್ರಮ ರಾಷ್ಟ್ರದ ಏಕತೆಗಾಗಿ ಕೆಲಸ ಮಾಡಲಿ. ರಾಷ್ಟ್ರೀಯತೆಗಾಗಿ ಎಲ್ಲರೂ ಕೆಲಸ ಮಾಡೋಣ ಎಂದರು.
ಚುನಾವಣೆಗೆ ಮುಂಚೆ ಜಾತಿ ಗೊತ್ತಿರಲಿಲ್ಲ:
ನಾನು ಚುನಾವಣೆಗೆ ಸ್ಪರ್ಧಿಸುವ ಮೊದಲು ನನಗೆ ಜಾತಿ ಗೀತಿ ಗೊತ್ತಿರಲಿಲ್ಲ. ಚುನಾವಣೆ ಸಮಯದಲ್ಲಿ ನಾನು ಹಿಂದುಳಿದ ವರ್ಗ ಅಂತ ಗೊತ್ತಾಯ್ತು. ಮೈಸೂರು ಅರಸರು ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ನಂತರ ತಿಳಿಯಿತು. ಚುನಾವಣೆ ಸಮಯದಲ್ಲಿ ನಾನು ಒಬಿಸಿ ಅಭ್ಯರ್ಥಿ ಎಂದು ಗೊತ್ತಾಯಿತು. ಯಾಕೋ ಮೊದಲು ನನಗೆ ಜಾತಿಯ ಬಗ್ಗೆ ಕಲ್ಪನೆ ಮಾಡಲಿಲ್ಲ. ಆದರೆ, ಜಾತಿಯ ಮೂಲಕವೇ ಭಾರತದ ವೈವಿಧ್ಯತೆ ಸಂರಕ್ಷಣೆ ಮಾಡಬಹುದು. ಜಾತಿ ವ್ಯವಸ್ಥೆಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು. ರಾಜಕೀಯ ಜೀವನ ಆರಂಭವಾದ ನಂತರ ಒಬಿಸಿ ಸಮಸ್ಯೆ ಅರಿವಾಗಿದೆ. ರಾಜವಂಶಸ್ತರು ಒಬಿಸಿಯಾ ಎಂದು ಎಲ್ಲರೂ ನಗುತ್ತಾರೆ. ಹಾಗಾಗಿ ಜಾತಿ ಲೆಕ್ಕದಲ್ಲಿ ಮಾತನಾಡುತ್ತಿಲ್ಲ ಸಮುದಾಯದ ಹಿತ ದೃಷ್ಟಿಯಿಂದ ಮಾತನಾಡುತ್ತೇವೆ ಎಂದು ಹೇಳಿದರು
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.