ಉಡುಪಿ: ಸದ್ಯ ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಸಂಘಟನೆಗಳಾಗಲೀ ನಕ್ಸಲರಾಗಲಿ ಸಕ್ರಿಯರಾಗಿ ಇಲ್ಲ. ಲಕ್ಷ್ಮೀ ಶರಣಾಗುವ ಮೂಲಕ ಇಡೀ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಗಿದೆ. ಈ ಬಗ್ಗೆ ಮುಂದೆ ರಾಜ್ಯ ಸರಕಾರ ಘೋಷಣೆ ಮಾಡಬಹುದು ಎಂದು ನಕ್ಸಲ್ ಪುನವರ್ಸತಿ ಮತ್ತು ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ ಕೆ.ಪಿ. ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕ್ಸಲ್ ಪ್ರಕರಣಗಳ ತುರ್ತು ವಿಚಾರಣೆಗಾಗಿ ರಾಜ್ಯ ಸರಕಾರ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಈ ಬಗ್ಗೆ ಸಮಿತಿಯು ಸರಕಾರದ ಮೇಲೆ ಒತ್ತಡ ಹೇರಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ರಾಜ್ಯ ಸರಕಾರ, ಪೊಲೀಸ್ ಇಲಾಖೆ ಹಾಗೂ ಸಮಿತಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಿದೆ. ಅಲ್ಲದೆ ವಿಶೇಷ ಅಭಿಯೋಜಕರನ್ನು ನೇಮಕ ಮಾಡಿ ನಕ್ಸಲರ ಬಗ್ಗೆ ಡಿಫೆನ್ಸ್ ಮಾಡಲು ಆದ್ಯತೆ ನೀಡಬೇಕು ಎಂದರು.
ಇತ್ತೀಚೆಗೆ ರಾಜ್ಯದಲ್ಲಿ ಎಂಟು ಮಂದಿ ನಕ್ಸಲರು ಶರಣಾಗಿದ್ದು, ಈ ಹಿಂದೆ ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ ಈವರೆಗೆ 22 ಮಂದಿ ನಕ್ಸಲರು ಶರಣಾಗಿ ದ್ದಾರೆ. ಅದೇ ರೀತಿ ಕೆಲವು ಮಂದಿ ಬಂಧಿತ ನಕ್ಸಲರು ಕೂಡ ಇದ್ದಾರೆ. ಇವರ ಎಲ್ಲ ಪ್ರಕರಣಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತುರ್ತು ವಿಚಾರಣೆ ನಡೆಸಬೇಕು. ಆ ಮೂಲಕ ಕರ್ನಾಟಕವು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.