ಉಡುಪಿ : ಕನ್ನಡ ನಾಡು ನುಡಿಯ ಕುರಿತು ಅಭಿಮಾನವನ್ನು ಮೂಡಿಸುವ ಉದ್ದೇಶದಿಂದ ‘ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ’ಯು ಪ್ರತಿ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು, ಅನೇಕ ಶತಮಾನಗಳ ಇತಿಹಾಸದ ಕನ್ನಡ ನಾಡು, ಭಾಷೆ ಪ್ರತಿಯೊಬ್ಬರ ಹೆಗ್ಗಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಸ್ವಾಗತ ಕೋರಿ ಚಂಡೆ ಬಾರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಪರಂಪರೆ ದೇಶದ ಪ್ರಾಚೀನ ಪರಂಪರೆಯಲ್ಲಿ ಒಂದಾಗಿದೆ. ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು. 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21 ಹಾಗೂ 22ರಂದು ಮಂಡ್ಯದಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.