ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾಯಿಬ್ರಕಟ್ಟೆ ಶಾಖೆಯು ಬ್ರಹ್ಮಾವರ- ಹಾಲಾಡಿ ಮುಖ್ಯರಸ್ತೆಯಲ್ಲಿರುವ ಸಾಯಿಬ್ರಕಟ್ಟೆ ಎಸ್.ಎಸ್. ಕಾಂಪ್ಲೆಕ್ಸ್ ನೆಲ ಅಂತಸ್ತಿಗೆ ಸ್ಥಳಾಂತರಗೊಂಡಿದ್ದು, ಸಂಪೂರ್ಣ ಹವಾನಿಯಂತ್ರಿತ ಸ್ಥಳಾಂತರ ಶಾಖೆ ಹಾಗೂ ಎಟಿಎಂ ಉದ್ಘಾಟನೆಗೊಂಡಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸ್ಥಳಾಂತರ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರ ಪ್ರಬಲವಾದ ಪಾತ್ರವನ್ನು ನಿರ್ವಹಿಸಿದ್ದು, ಜನರ ಕಷ್ಟ, ಸುಖಗಳಿಗೆ ಸ್ಪಂದಿಸುತ್ತಿದೆ. ರೈತರು, ಮಹಿಳೆಯರು ಸೇರಿದಂತೆ ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರ ಮಾರ್ಗದರ್ಶನದ ದಕ್ಷ ಆಡಳಿತ ಮಂಡಳಿ, ಪ್ರಾಮಾಣಿಕ ಮತ್ತು ನಗುಮೊಗದ ಸಿಬ್ಬಂದಿ, ಪೂರಕ ವಾತಾವರಣದೊಂದಿಗೆ ಬ್ಯಾಂಕ್ ಉತ್ತುಂಗದ ಶಿಖರಕ್ಕೇರಿದ್ದು, ರೈತರಿಗೆ ಪೂರಕವಾಗಿ ಸ್ಪಂದಿಸುತ್ತಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಶಿರಿಯಾದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಪ್ರದೀಪ್ ಬಲ್ಲಾಳ್, ಶಿರಿಯಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಾಖಾ ಕಟ್ಟಡ ಮಾಲೀಕರಾದ ಸುರೇಶ್ ಶೆಟ್ಟಿ ಬಿ., ಶರತ್ ಕುಮಾರ್ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಕೆ.ಆರ್. ಲಾವಣ್ಯ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಕಾರಿ (ಪ್ರಭಾರ) ಗೋಪಾಲಕೃಷ್ಣ ಭಟ್ ಕೆ., ನಿರ್ದೇಶಕರಾದ ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಕೆ. ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಬಿ. ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಉಪಸ್ಥಿತರಿದ್ದರು. ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು.