ಉಡುಪಿ: ಈ ಮಟ್ಟದ ಸೋಲನ್ನು ನಾನು ನಿರೀಕ್ಷಿಸಿರಲಿಲ್ಲ. ಮತದಾರರ ನಿರ್ಣಯವನ್ನು ಸ್ವೀಕರಿಸುತ್ತೇನೆ. ಸೋಲಿನಿಂದ ನಾನು ಓಡಿ ಹೋಗುವುದಿಲ್ಲ. ರಾಜಕೀಯ, ಸಾಮಾಜಿಕ ಕಾರ್ಯಕರ್ತನಾಗಿ ಇರ್ತೇನೆ. ಕಾರ್ಯಕರ್ತರ ಧ್ವನಿಯಾಗಿ ಇರ್ತೇನೆ ಎಂದು ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ಎದುರು ಹಾಕಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೆ. ಈ ಚುನಾವಣೆಯಲ್ಲಿ ನನಗೆ ಸಮಯದ ಕೊರತೆ ಆಯ್ತು. ನೋಂದಣಿ ದೊಡ್ಡ ಸಮಸ್ಯೆ, ಇದರಿಂದ ಕೊರತೆ ಆಯ್ತು. ಗೆಲ್ಲುವ ವಿಶ್ವಾಸದಲ್ಲೇ ನಾನು ಸ್ಪರ್ಧಿಸಿದ್ದು, ಅನೇಕ ನಾಯಕರು ನನ್ನ ಸಾತ್ವಿಕ ಹೋರಾಟವನ್ನು ಬೆಂಬಲಿಸಿದರು. ನನ್ನ ಜೊತೆ ಬಂದವರ ಪರ ಇರೋದು ನನ್ನ ಜವಾಬ್ದಾರಿ ಎಂದರು.
ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ. ಹಿಂದುತ್ವ ,ರಾಷ್ಟ್ರೀಯತೆ ಗೆ ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದೆ. ತಪ್ಪು ನಿರ್ಧಾರಗಳ ಬಗ್ಗೆ ಪಕ್ಷ ಎಚ್ಚೆತ್ತುಕೊಳ್ಳಬೇಕು ಎಂದು ನನ್ನ ಅಭಿಲಾಷೆಯಾಗಿತ್ತು. ಅವಕಾಶ ವಂಚಿತರಿಗೆ ಈ ಹಿಂದೆ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿತ್ತು. ಇನ್ಮುಂದೆ ಹಣ ಇದ್ದವರೂ ಮಾತ್ರ ಸ್ಪರ್ಧೆ ಮಾಡುವ ಸ್ಥಿತಿ ಬಂದಿದೆ. ಇದು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಬೇಸರದ ವಿಷಯ ಎಂದು ಹೇಳಿದರು.
ಪಕ್ಷದ ತಪ್ಪು ನಿರ್ಧಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸುವುದು ಉದ್ದೇಶವಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ. ಆರ್ ಎಸ್ ಎಸ್ ನೇರವಾಗಿ ಫೀಲ್ಡ್ ಗೆ ಇಳಿದು ಕೆಲಸ ಮಾಡುವಂತಾಯ್ತು. ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬರುವಂತಾಯಿತು. ಎಚ್ಚರಿಸುವ ಕೆಲಸ ಆಗಬೇಕಿತ್ತು ಅದನ್ನು ಮಾಡಿದ್ದೇನೆ.
ಸಾಮಾಜಿಕ ರಾಜಕೀಯ ಜೀವನದಿಂದ ಹಿಂದೆ ಸರಿಯುವುದಿಲ್ಲ. ನನ್ನ ಮನೆ ಸದಾ ನೊಂದವರಿಗೆ, ಸಮಸ್ಯೆ ಇರುವವರಿಗೆ ತೆರೆದಿರುತ್ತದೆ. ನಾನು ಬಿಜೆಪಿಯ ಕಾರ್ಯಕರ್ತರನ್ನಾಗಿ ಮುಂದುವರಿಯುತ್ತೇನೆ. ರಾಷ್ಟ್ರೀಯತೆ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುತ್ತೇನೆ. ಬಿಜೆಪಿ ಲೋಕಸಭೆಗಿಂತಲೂ ಗಂಭೀರವಾಗಿ ಸವಾಲಾಗಿ ಚುನಾವಣೆ ನಡೆಸಿತು. ಇದೇ ಮೊದಲ ಬಾರಿಗೆ ಕ್ಷೇತ್ರಾದ್ಯಂತ ಹಣ ಹಂಚುವ ಕೆಲಸವಾಗಿದೆ. ಚುನಾವಣೆ ಮುಗಿದ ನಂತರ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.