ಉಡುಪಿ: ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘಗಳ (ಸಿಐಟಿಯು) ನೇತೃತ್ವದಲ್ಲಿ ಇಂದು ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿ ಕಂಪನಿಗೆ ಮುತ್ತಿಗೆ ಹಾಕಲಾಯಿತು.
ಹಲವು ಸಮಯದಿಂದ ಬೀಡಿ ಎಲೆ ಹಾಳಾಗಿದ್ದು, ಸರಿಪಡಿಸಲು ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರೂ ಎಚ್ಚೆತ್ತುಕೊಳ್ಳದ ಕಂಪನಿಯ ವಿರುದ್ಧ ಇಂದು ಸಂಘದ ಮುಖಂಡರು ಹಾಗೂ ಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಿದರು. ಬಳಿಕ ಕಂಪನಿಗೆ ಮುತ್ತಿಗೆ ಹಾಕಲಾಯಿತು.
ಈ ವೇಳೆ ಸಮಜಾಯಿಷಿ ನೀಡಿದ ಕಂಪನಿಯ ಮ್ಯಾನೇಜರ್ , ಹಳೇ ಬೀಡಿ ಎಲೆ ಖಾಲಿ ಮಾಡಿದ್ದು ಈಗ ಹೊಸ ಎಲೆ ಪೂರೈಕೆಯಾಗಿದೆ. ಎರಡು ದಿನಗಳಲ್ಲಿ ಹೊಸ ಎಲೆಯನ್ನು ಕಾರ್ಮಿಕರಿಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಸಂಘದ ಮುಖಂಡರು ಹಾಗೂ ಕಾರ್ಮಿಕರು ಎಲೆ ಸಂಸ್ಕರಿಸುವ ಗೋಡೌನ್ ಗೆ ಹೋಗಿ ಪರಿಶಿಲಿಸಿದರು.ಬಳಿಕ ಪ್ರತಿಭಟನೆಯನ್ನು ವಾಪಸು ಪಡೆಯಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ರಾದ ಬಲ್ಕೀಸ್,ಕಾರ್ಯದರ್ಶಿ ಉಮೇಶ್ ಕುಂದರ್ ಮಾತನಾಡಿದರು.