ಉಡುಪಿ: ನಕ್ಸಲ್ ವಿಕ್ರಂ ಗೌಡನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿಲ್ಲ, ಇದು ಆರೋಪ ಸುಳ್ಳು. ನಕ್ಸಲರು ಮತ್ತು ಎಎನ್‌ಎಫ್ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾರೆ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎನ್‌ಕೌಂಟರ್ ಬಗ್ಗೆ ಯಾವುದೇ ಸಂಶಯ ಬೇಡ. ಎಎನ್‌ಎಫ್ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ನಡೆಸಿದ ದಾಳಿ ಇದಾಗಿದೆ ಹೊರತು ಪೂರ್ವ ನಿಯೋಜಿತ ಅಲ್ಲ ಎಂದರು.
ನ.18ರಂದು ಸಂಜೆ ಆರು ಗಂಟೆಗೆ ನಮ್ಮ ತಂಡ ಹೋಗುತ್ತಿರುವಾಗ 3-4 ಬಂದೂಕುದಾರಿ ನಕ್ಸಲರು ಎದುರಾದರು. ಆ ವೇಳೆ ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ವಿಕ್ರಂ ಗೌಡ ಮೃತಪಟ್ಟು, ಉಳಿದವರು ಗುಂಡು ಹಾರಿಸಿಕೊಂಡು ಕಾಡಿನಲ್ಲಿ ಪರಾರಿಯಾದರು ಎಂದು ತಿಳಿಸಿದರು.
ಮೃತಪಟ್ಟಿರುವುದು ವಿಕ್ರಂ ಗೌಡ ಅಲ್ಲ ಎಂದು ಹೇಳುತ್ತಿರುವುದು ತಪ್ಪು. ಯಾಕೆಂದರೆ ಈಗಾಗಲೇ ಅವನ ಮೃತದೇಹವನ್ನು ಅವನ ಮನೆಯವರು ಗುರುತಿಸಿ, ಸ್ವೀಕರಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದರು.
ಮೃತ ವಿಕ್ರಂ ಗೌಡನ ಬಳಿ ದೊರೆತ 9 ಎಂ.ಎಂ. ಕಾರ್ಬೈನ್(ಮೆಷಿನ್) ಗನ್, ರಿವಾಲ್ವರ್, ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ. ವಿಕ್ರಂ ಗೌಡನ ಎದೆ, ಹೊಟ್ಟೆ ಭಾಗಕ್ಕೆ ಗುಂಡುಗಳು ಬಿದ್ದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.