ಉಡುಪಿ: ಉಡುಪಿ ಬೈಲಕೆರೆಯ ವಿದ್ಯೋದಯ ಶಾಲೆಯ ಬಳಿಯ ಇಂದ್ರಾಣಿ ತೋಡಿನಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ವ್ಯಕ್ತಿ ಮೃತಪಟ್ಟು ಮೂರು ದಿನಗಳು ಕಳೆದಿರಬಹುದೆಂದು ಶಂಕಿಸಲಾಗಿದೆ.
ಮೃತನ ಹೆಸರು, ವಿಳಾಸ ತಿಳಿದುಬಂದಿಲ್ಲ. ವಾರಸುದಾರರು ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಸ್ಥಳಿಯರಾದ ಸುನಿಲ್ ಬೈಲಕೆರೆ ಅವರು ಶವ ಕಂಡು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಬಂದ ಒಳಕಾಡು ಅವರು, ತೋಡಿನಲ್ಲಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಿದ್ದರು.
ನಗರ ಪೊಲೀಸ್ ಠಾಣೆಯ ಎ.ಎಸ್.ಐ ನವೀನ್ ದೇವಾಡಿಗ, ಹೆಡ್ ಕಾನ್ಸಟೇಬಲ್ ತಾರಾನಾಥ್ ಘಟನಾ ಸ್ಥಳದಲ್ಲಿದ್ದು ಮಹಜರು ಪ್ರಕ್ರಿಯೆ ನಡೆಸಿದರು. ಮೃತ ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡು ಉಚಿತ ಆಂಬುಲೆನ್ಸ್ ಸೇವೆ ನೀಡಿ ಸಹಕರಿಸಿದರು. ಉಮೇಶ್ ಬೈಲಕೆರೆ ಸಹಕರಿಸಿದರು.