ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಉಳಿದ ನಕ್ಸಲರಿಗಾಗಿ ಶೋಧ ತೀವ್ರಗೊಂಡಿದೆ. ಈ ನಡುವೆ ಬೆಂಗಳೂರಿನ ಎಫ್ ಎಸ್ ಎಲ್ ಟೀಂ ಎನ್ ಕೌಂಟರ್ ಪ್ರದೇಶಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಕಲೆ ಹಾಕುತ್ತಿದೆ.
ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನೊಂದಿಗೆ ಇದ್ದ ಇತರೇ ನಕ್ಸಲರು ಎನ್ ಕೌಂಟರ್ ಸಂದರ್ಭ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ವಿಕ್ರಂ ಗೌಡ ಎನ್ ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್ ಎಸ್ ಎಲ್ ಟೀಂ ಮತ್ತೊಮ್ಮೆ ಭೇಟಿ ನೀಡಿದೆ.
ಆಂತರಿಕ ಭದ್ರತಾ ವಿಭಾಗಕ್ಕೆ ಈ ಎನ್ ಕೌಂಟರ್ ಒಂದು ಹೆಮ್ಮೆಯ ಗರಿಯಾಗಿದೆ. ಇದಕ್ಕೆ ಯಾವ ಕಳಂಕವೂ ಅಂಟಿಕೊಳ್ಳದಿರಲಿ ಎಂದು ಎಎನ್ ಎಫ್ ಕೂಡ ಅಲರ್ಟ್ ಆಗಿದೆ. ನಕ್ಸಲ್ ನಿಗ್ರಹ ದಳದ ಅಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರಿನ ಎಫ್ಎಸ್ಎಲ್ ಟೀಂ ಎನ್ ಕೌಂಟರ್ ನಡೆದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದೆ.
ಈ ಎನ್ ಕೌಂಟರ್ ಪ್ರಕರಣದಲ್ಲಿ 2 ಎಫ್ ಎಸ್ ಎಲ್ ತಂಡ ಮಾಹಿತಿ ಕಲೆ ಹಾಕಿದ್ದು, ಖಚಿತ ದಾಖಲೆಗಳ ಸಂಗ್ರಹ, ಸಾಕ್ಷ್ಯಾಧಾರಗಳ ಹೋಲಿಕೆಗಾಗಿ ಎರಡು ಬಾರಿ ಎಫ್ ಎಸ್ ಎಸ್ ನಿಂದ ಮಾಹಿತಿ ಕಲೆಹಾಕಲಾಗಿದೆ.