ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯು 22ನೇ ವರ್ಷದ “ಭರತಮುನಿ ಜಯಂತ್ಯುತ್ಸವ”ವನ್ನು ಇದೇ ಡಿ.1ರಂದು ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದೆ ಎಂದು ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಮುರಳೀಧರ ಸಾಮಗ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಕೃಷ್ಣಮಠದ ಎದುರಿನಿಂದ ನಾಟ್ಯ ಶಾಸ್ತ್ರಗ್ರಂಥ, ನಟರಾಜ ಹಾಗೂ ಗಣ್ಯರನ್ನು ಒಳಗೊಂಡು ಕುಂಭ ಕಲಶದೊಂದಿಗೆ ರಾಜಾಂಗಣಕ್ಕೆ ಮೆರವಣಿಗೆ ಆಗಮಿಸಲಿದೆ.
ಬೆಳಿಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಪುತ್ತಿಗೆ ಮಠದ ಕಿರಿಯ ಪೀಠಾಧಿಪತಿ ಸುಶೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದಾರೆ. ಎಂಜಿಎಂ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮುರಲೀಧರ ನೆಂಪು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಅನನ್ಯ ಕಲಾನಿಕೇತನದ ನೃತ್ಯ ನಿರ್ದೇಶಕಿ ಬೃಂದಾ, ಬೆಂಗಳೂರು ಭರತ ನೃತ್ಯ ಸಂಗೀತ ಅಕಾಡೆಮಿಯ ನೃತ್ಯ ನಿರ್ದೇಶಕಿ ಶುಭಾರಾಣಿ ಬೋಳಾರ್, ಪ್ರಸಿದ್ಧ ಸ್ಯಾಕ್ಷಫೋನ್ ಕಲಾವಿದ ದಾಮೋದರ್ ಸೇರಿಗಾರ್ ಹಾಗೂ ಉಡುಪಿ ಕೃಷ್ಣ ಗಾನ ಸುಧಾ ಸಂಗೀತ ವಿದ್ಯಾಲಯದ ಸಂಗೀತ ಗುರು ಉಷಾ ಹೆಬ್ಬಾರ್ ಅವರಿಗೆ ಭರತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಗೆಯೇ, ವಿದುಷಿ ರಾಧಿಕಾ ಉಡುಪ ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಮತ್ತು ಶೇಖರ್ ಕಲಾಪ್ರತಿಭಾ ಅಲೆವೂರು ಅವರಿಗೆ ಕಲಾರ್ಪಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ರಾತ್ರಿ 7ಗಂಟೆಗೆ ರಾಧಾಕೃಷ್ಣ ನೃತ್ಯ ನಿಕೇತನದ ಕಲಾವಿದರಿಂದ ಭರತನಾಟ್ಯ, ಕೂಚುಪುಡಿ ಪ್ರದರ್ಶನಗೊಳ್ಳಲಿದೆ. ಬಳಿಕ ಪುತ್ತಿಗೆ ಪರ್ಯಾಯದ ವಿಶೇಷ ಗೀತಾ ಮಹೋತ್ಸವಕ್ಕಾಗಿ ಸಂಯೋಜಿಸಿದ ನೃತ್ಯ ರೂಪಕ “ಗೀತೋಪದೇಶ” ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಬಿ. ಮುರಳೀಧರ ಸಾಮಗ, ಡಾ.ಸರಸ್ವತಿ ದ್ವಾರಕನಾಥ, ವಿದುಷಿ ಅಮೃತ ಪ್ರಸಾದ್, ಸಿಂಚನಾ, ರಂಜಿತಾ ಇದ್ದರು.