ಉಡುಪಿ: ಬಾಡಿಗೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಆಟೋ ಚಾಲಕರ ತಂಡವೊಂದು ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದಲ್ಲಿ ಇಂದು ನಡೆದಿದೆ.
ಪ್ರತಾಪ್ ಚಂದ್ರ ಹಲ್ಲೆಗೊಳಗಾದ ರಿಕ್ಷಾ ಚಾಲಕ. ಉಡುಪಿ ನಗರದ ಸಿಟಿ ಬಸ್ ಸ್ಟ್ಯಾಂಡ್ ವ್ಯಾಪ್ತಿಯಲ್ಲಿ ಇವರು ರಿಕ್ಷಾ ಬಾಡಿಗೆ ಮಾಡುತ್ತಿರುವಾಗ ಆಟೋ ಚಾಲಕರ ತಂಡವು ಇವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ತಂಡವು ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಬಾಡಿಗೆ ಮಾಡಬಾರದು ಎಂದು ಪ್ರತಾಪ್ ಚಂದ್ರ ಅವರಿಗೆ ವಾರ್ನಿಂಗ್ ಮಾಡಿದೆ.
ನಗರದಲ್ಲಿ ಬಾಡಿಗೆ ಮಾಡಲು ನನಗೆ ಅನುಮತಿ ಇದೆ ಎಂದು ಪ್ರತಾಪ್ ಚಂದ್ರ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಚಾಲಕ ಪ್ರತಾಪ್ ಚಂದ್ರ ಸದ್ಯ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
Ad