ಉಡುಪಿ: ಕೆಲವೊಂದು ಸಮಸ್ಯೆಗಳಿಗೆ ಹೋರಾಟದಿಂದ ಯಾವುದೇ ಪರಿಹಾರ ಸಿಗಲ್ಲ ಎಂಬುವುದನ್ನು ಅರಿತು ನಾನು ನಕ್ಸಲ್ ಚಟುವಟಿಕೆಯಿಂದ ಹೊರ ಬಂದೆ. ಚಳವಳಿ ಮಾಡಬೇಕು. ಆದರೆ ಈ ದಾರಿ ಸರಿ ಇಲ್ಲ. ಶಸ್ತ್ರಾಸ್ತ ಹಿಡಿದು ಹೋರಾಟ ಮಾಡುವ ಬದಲು ಅಂಬೇಡ್ಕರ್ ಸಂವಿಧಾನದಲ್ಲಿ ಕೊಟ್ಟ ಅವಕಾಶದಂತೆ ಹೋರಾಟ ಮಾಡಬೇಕು ಎಂದು ಲಕ್ಷ್ಮೀ ತೊಂಬಟ್ಟು ಅವರ ಪತ್ನಿ, ಮಾಜಿ ನಕ್ಸಲ್ ಸಲೀಂ ಯಾನೆ ಸಂಜೀವ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನಾನು ಮತ್ತು ಲಕ್ಷ್ಮೀ ಚಳವಳಿಯಲ್ಲಿ ಇರುವಾಗಲೇ ಪ್ರೀತಿಸಿ 2008ರಲ್ಲಿಯೇ ಮದುವೆಯಾಗಿದ್ದೇವೆ. ಅದರ ನಂತರ ನಾನು 2009ರಲ್ಲಿ ಆಂಧ್ರ ಸರಕಾರದ ಮುಂದೆ ಶರಣಾಗಿ ಇದೀಗ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕು ನಡೆಸುತ್ತಿದ್ದೇನೆ. ನನ್ನ ಮೇಲೆ ಸದ್ಯ ಯಾವುದೇ ಪ್ರಕರಣಗಳು ಇಲ್ಲ ಎಂದರು.
ನಾನು ಆಂಧ್ರಪ್ರದೇಶದವನಲ್ಲ. ಮೂಲತ: ಕರ್ನಾಟಕದ ಪಾವಗಡ ತಾಲೂಕಿನವನು. ಸದ್ಯಕ್ಕೆ ಆಂಧ್ರಪ್ರದೇಶದ ಅನಂತನಗರದಲ್ಲಿ ವ್ಯಾಪಾರ ಮಾಡಿಕೊಂಡಿದ್ದೇನೆ. ಲಕ್ಷ್ಮೀ ಮೇಲಿನ ಮೂರು ಕೇಸುಗಳನ್ನು ಕ್ಲೋಸ್ ಮಾಡಲೇಂದು ಆಕೆ ಶರಣಾಗಿದ್ದಾಳೆ. ಖುಲಾಸೆಯಾದ ಬಳಿಕ ನಾವು ಮುಂದೆ ಕರ್ನಾಟಕದಲ್ಲಿಯೇ ಬದುಕು ನಡೆಸಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದರು.