ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಪ್ರಕರಣವನ್ನು ದುರ್ಬಲಗೊಳಿಸಿರುವುದನ್ನು ಖಂಡಿಸಿ ಹಾಗೂ ಉಡುಪಿ ಡಿವೈಎಸ್ಪಿ ಪ್ರಭು ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು, ಎಸ್ ಸಿ- ಎಸ್ ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಪೊಲೀಸರ ಹುನ್ನಾರಕ್ಕೆ ಎಂದೂ ಹೆದರವುದಿಲ್ಲ. ಎಸ್ ಸಿ- ಎಸ್ ಟಿ ಕಾಯ್ದೆಯಡಿ ದಾಖಲಾದ ಪ್ರಕರಣವೊಂದಕ್ಕೆ ಸರಿಯಾದ ಸಾಕ್ಷ್ಯಾಧಾರವಿಲ್ಲವೆಂದು ಉಡುಪಿ ಡಿವೈಎಸ್ಪಿ ಪ್ರಭು ಅವರು ಬಿ ರಿಪೋಟ್ ಹಾಕಿದ್ದು, ಅವರು ಆರೋಪಿಗಳ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ದಲಿತರ ಬೆನ್ನಿಗೆ ಚೂರಿ ಹಾಕುವ ಇಂತಹ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಂದ ಮತ್ತು ಸರಕಾರಿ ನೌಕರರಿಂದಲೇ ದಲಿತರಿಗೆ ಅನ್ಯಾಯವಾಗುತ್ತಿದೆ. ಮೇಲ್ಜಾತಿಯ ಅಧಿಕಾರಿಗಳು ತಾಳ್ಮೆಯಿಂದ ಸ್ಪಂದಿಸಿ ಕೆಲಸ ಮಾಡಿಕೊಟ್ಟರೂ, ದಲಿತ ಅಧಿಕಾರಿಗಳು ಮತ್ತು ನೌಕರರೇ ಮೀಸಲಾತಿಯ ಲಾಭ ಪಡೆದು ಬಡದಲಿರಿಗೆ ದೌರ್ಜನ್ಯ, ದಬ್ಬಾಳಿಕೆಯಿಂದ ವರ್ತಿಸುತ್ತಿದ್ದಾರೆಂದು ಎಂದು ಅವರು ದೂರಿದರು.
ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ದಲಿತರ ಪರ ನ್ಯಾಯವಿದ್ದರೂ ಬೀದಿಯಲ್ಲಿ ನಿಂತು ಪ್ರಜಾಪ್ರಭುತ್ವ ರಕ್ಷಕರಿಗೆ ದಿಕ್ಕಾರ ಕೂಗುವ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆರೋಪಿಗಳ ಪರ ಪೊಲೀಸ್ ಉಪಾಧೀಕ್ಷಕರು ಶಾಮಿಲಾಗಿರವುದು ಖಂಡನಾರ್ಹ ಎಂದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ದಲಿತ ಹೋರಾಟಗಾರ್ತಿ ಸುಂದರಿ ಪುತ್ತೂರು, ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ಕೃಷ್ಣ ಬಂಗೇರ, ಅನಂತ ನಾಯ್ಕ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆಯ ಹರೀಶ್ ಸಾಲಿಯಾನ್, ಯುವರಾಜ್ ಪುತ್ತೂರು, ರವಿರಾಜ್, ಭಗವಾನ್, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಮಂಚಿ, ಸುರೇಶ್ ಚಿಟ್ಪಾಡಿ, ಸಂಧ್ಯಾ ತಿಲಕ್‌ರಾಜ್, ಸರಸ್ವತಿ ಕಿನ್ನಿಮುಲ್ಕಿ ಮೊದಲಾದವರು ಪಾಲ್ಗೊಂಡಿದ್ದರು