ಉಡುಪಿ: ಬೈಂದೂರು ಬಿಜೆಪಿ ಮಂಡಲ ವತಿಯಿಂದ ವಕ್ಫ್ ಬೋರ್ಡ್ ನ ಲ್ಯಾಂಡ್ ಜಿಹಾದ್ ವಿರುದ್ಧ ಬೈಂದೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ, ವಕ್ಫ್ ಬೋರ್ಡ್ ನ ಲ್ಯಾಂಡ್ ಜಿಹಾದ್ ವಿರುದ್ದ ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.
ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ನ ಅನಧಿಕೃತ ಚಟುವಟಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು ಕುರಿತು ಕಳೆದ ಒಂದು ವರ್ಷದಿಂದ ವಿಮರ್ಶೆ ಮಾಡುತ್ತಿದ್ದಾರೆ. ಶಾಂತಿ ಸಾಮರಸ್ಯದ ನಾಡಾಗಿದ್ದ ನಮ್ಮ ರಾಜ್ಯದಲ್ಲಿ ವಕ್ಫ್ ಮಂಡಳಿ ಮೂಲಕ ಸರಕಾರದ ಜಾಗ ಕಬಳಿಸುವ ಸಚಿವ ಜಮೀರ್ ಅಹ್ಮದ್ ಹುನ್ನಾರ ರಾಜ್ಯದ ಜನತೆಯನ್ನು ಕೆರಳಿಸಿದೆ. ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಬಹುಸಂಖ್ಯಾತರ ನೋವನ್ನು ಪ್ರತಿಭಟನೆ ಮೂಲಕ ಎದುರಿಸಬೇಕಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ರಾಜ್ಯ ಕಾಂಗ್ರೇಸ್ ಸರಕಾರ ಅಲ್ಪಸಂಖ್ಯಾತರ ಮತ ಪಡೆಯಲು ಬಹುಸಂಖ್ಯಾತರನ್ನು ಮಾನಸಿಕ ಭಾವನೆಗಳನ್ನು ಕೆರಳಿಸುತ್ತಿದೆ, ಮಠ ಮಂದಿರ ದಲಿತರ ಆಸ್ತಿ ಕಬಳಿಸುವ ಹುನ್ನಾರ ಎಂದರು. ಬಳಿಕ ಬೈಂದೂರು ತಹಶಿಲ್ದಾರ ಪ್ರದೀಪ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.