Bengaluru 23°C

ಪಂಚತಾರಾ ಹೊಟೇಲ್‌ಗಳಿಗೆ ಪಂಗನಾಮ; ಖತರ್ನಾಕ್ ವೃದ್ಧ ಮಣಿಪಾಲದಲ್ಲಿ ಸೆರೆ.!

ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಷ್ಠಿತ ಫೈವ್ ಸ್ಟಾ‌ರ್ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಮಣಿಪಾಲ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಉಡುಪಿ: ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಷ್ಠಿತ ಫೈವ್ ಸ್ಟಾ‌ರ್ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಮಣಿಪಾಲ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.


ತಮಿಳುನಾಡು ರಾಜ್ಯದ ತೂತುಕುಡಿಯ ಬಿಮ್ಸೆಂಟ್ ಜಾನ್(67) ಬಂಧಿತ ಆರೋಪಿ. ಈತ ಡಿಸೆಂಬರ್ 7ರಂದು ಮಣಿಪಾಲ ಕಂಟ್ರಿ ಇನ್‌ ಹೊಟೇಲ್‌ನಲ್ಲಿ ರೂಮ್ ಪಡೆದುಕೊಂಡಿದ್ದ. ಮುಂಗಡ ಹಣವನ್ನು ಡಿಸೆಂಬ‌ರ್ 9ರಂದು ಕೊಡುವುದಾಗಿ ಹೇಳಿ ಡಿಸೆಂಬರ್ 12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ ಎಂದು ಹೊಟೇಲ್ ಮ್ಯಾನೇಜರ್‌ನ್ನು ನಂಬಿಸಿ ರೂಮ್‌ನಲ್ಲಿ ಉಳಿದುಕೊಂಡಿದ್ದ.


ಬಳಿಕ ಹೊಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298ರೂ. ಬಿಲ್ ಮಾಡಿ ಹಣ ಕೊಡದೇ ಪರಾರಿಯಾಗಿ ನಂಬಿಸಿ ಮೋಸ ಮಾಡಿರುವುದಾಗಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಆರೋಪಿ ಜಾನ್ ಎಂಬಾತನನ್ನು ಮಣಿಪಾಲದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.


 

ಈತ ಇದೇ ರೀತಿ ದೇಶದ ದೆಹಲಿ, ಮಹಾರಾಷ್ಟ್ರ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ರೂಮ್ ಪಡೆದು ಕೊಂಡು ಸಾವಿರಾರು ರೂ. ಬಿಲ್ ಮಾಡಿ, ಬಳಿಕ ಹಣ ಪಾವತಿಸದೆ ಪರಾರಿಯಾಗಿ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.


ಪದವೀಧರನಾಗಿರುವ ಈತನ ವಿರುದ್ಧ ದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.


Nk Channel Final 21 09 2023