ಉಡುಪಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಬೆಳಿಗ್ಗೆ ಗಂಟೆ 9ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ರಾಜಾಂಗಣದವರೆಗೆ ‘ಬೃಹತ್ ಜನಜಾಗೃತಿ ಜಾಥಾ’ ಹಾಗೂ 11ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ‘ಬೃಹತ್ ಜನಜಾಗೃತಿ ಸಮಾವೇಶ’ ವನ್ನು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥರು ಹಾಗೂ ಕಿರಿಯ ಸುಶೀಂಧ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಧಾರ್ಮಿಕ ಚಿಂತಕ ದಾಮೋದರ್ ಶರ್ಮ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್.ಕೆ.ಡಿ.ಆರ್.ಪಿ ಬಿ.ಸಿ ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಧ್ಯಕ್ಷ ಅಪ್ಪಣ್ಣ ಹೆಗ್ಡೆ, ಮನೋವೈದ್ಯ ಡಾ. ಪಿ. ವಿ ಭಂಡಾರಿ ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಅಮಿನ್, ಜನಜಾಗೃತಿ ವೇದಿಕೆಯ ಉಡುಪಿ ತಾಲೂಕು ಅಧ್ಯಕ್ಷ ಸತ್ಯಾನಂದ ನಾಯಕ್, ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ, ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ, ಯೋಜನಾಧಿಕಾರಿ ರಾಮ ಎಮ್ ಉಪಸ್ಥಿತರಿದ್ದರು.