ಉಡುಪಿ: ದುಶ್ಚಟ, ಕೆಟ್ಟ ಗೆಳೆಯರ ಸಹವಾಸಕ್ಕೆ ಬಲಿಯಾಗದಂತೆ ಮಕ್ಕಳ ಮಾತನ್ನು ದಿನಕ್ಕೆ ಅರ್ಧ ಗಂಟೆಯಾದರೂ ಹೆತ್ತವರು ಕೇಳಬೇಕು ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಳದ ಧರ್ಮದರ್ಶಿ ಡಾ. ನಿ. ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್(ಮುಂಬೈ), ದೊಡ್ಡನಗುಡ್ಡೆ ಡಾ. ಎ. ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಭಾರತೀಯ ವೈದ್ಯಕೀಯ ಸಂಘ(ಐ ಎಂ ಎ) ಉಡುಪಿ ಕರಾವಳಿ ಹಾಗೂ ರೋಟರಿ ಕ್ಲಬ್ ಉಡುಪಿ ಮಣಿಪಾಲ ಇದರ ಸಹಯೋಗದಲ್ಲಿ ದೊಡ್ಡನಗುಡ್ಡೆ ಡಾ. ಎ. ವಿ.ಬಾಳಿಗಾ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಹತ್ತು ದಿನಗಳ ಕಾಲ ನಡೆಯುವ 33ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಎ. ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಮದ್ಯ ಮುಕ್ತ ಜೀವನ ನಡೆಸುತ್ತಿರುವ ಸಂತೋಷ್, ರಾಘವೇಂದ್ರ, ಸೋಮಯ್ಯ, ರಾಮ, ಪ್ರತಾಪ್, ಜಯರಾಮ್ ಇವರನ್ನು ಸನ್ಮಾನಿಸಲಾಯಿತು. ಭಾರತೀಯ ವೈದ್ಯಕೀಯ ಸಂಘ(ಐ ಎಂ ಎ) ಉಡುಪಿ ಕರಾವಳಿ ಇದರ ಅಧ್ಯಕ್ಷ ಡಾ. ಸುರೇಶ್ ಶೆಣೈ ಹಾಗೂ ಮಣಿಪಾಲ ಕೆ ಎಂಸಿ ಮನೋ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅನಿಲ್ ಕುಮಾರ್ ಎಂ.ಎನ್. ಮಾತನಾಡಿದರು.
ಡಾ. ಮಾನಸ್ ಈ.ಎಸ್., ಡಾ. ದೀಪಕ್ ಮಲ್ಯ, ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷ ಸುಭಾಷ್ ಬಂಗೇರ ಉಪಸ್ಥಿತರಿದ್ದರು. ಮದ್ಯ ವ್ಯಸನ ವಿಮುಕ್ತರನ್ನು ಸೌಮ್ಯಾ ಮತ್ತು ರಕ್ಷಿತಾ ಪರಿಚಯಿಸಿದರು. ವೃತ್ತಿಪರ ಚಿಕಿತ್ಸಕಿ ಪೂರ್ಣಿಮಾ ಪ್ರಾರ್ಥಿಸಿದರು. ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಮೀಳಾ ಡಿಸೋಜಾ ನಿರೂಪಿಸಿ, ನಾಗರಾಜ್ ಮೂರ್ತಿ ವಂದಿಸಿದರು. ಶಿಬಿರದಲ್ಲಿ ಇಬ್ಬರು ಮಹಿಳೆಯರು, 41ಪುರುಷರು ಪಾಲ್ಗೊಂಡಿದ್ದರು.