ಉಡುಪಿ: ಪೇಜಾವರ ಮಠ, ಅಖಿಲ ಭಾರತ ಮಾಧ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಹಾಗೂ ಅನೇಕ ಸಂಘ ಸಂಸ್ಥೆೆಗಳ ಆಶ್ರಯದಲ್ಲಿ ಎ.9ರಿಂದ 13ರ ವರೆಗೆ ಪೆರ್ಣಂಕಿಲ ಕ್ಷೇತ್ರದಲ್ಲಿ 30ನೇ ಮಾಧ್ವ ತತ್ವಜ್ಞಾನ ಸಮ್ಮೇಳನ ನಡೆಯಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಪೆರ್ಣಂಕಿಲ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಸುದ್ದಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಕೀರ್ತಿಶೇಷ ಶ್ರೀವಿಶ್ವೇಶ ತೀರ್ಥ ಶ್ರೀಗಳು ಪ್ರತಿ 2 ವರ್ಷಕ್ಕೊಮ್ಮೆ ತತ್ವಜ್ಞಾನ ಸಮ್ಮೇಳನವನ್ನು ನಡೆಸುತ್ತಿದ್ದರು.
ಅವರು ವೃಂದಾವನವಾದ ಬಳಿಕ 2ನೇ ಸಮ್ಮೇಳನ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ ಘಟಿಕೋತ್ಸವ ಪೆರ್ಣಂಕಿಲದಲ್ಲಿ ನಡೆಯಲಿದೆ. ಜತೆಗೆ ಮಧ್ವಾಚಾರ್ಯರು ಭೇಟಿ ನೀಡಿದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಭಕ್ತಿರಥ ಯಾತ್ರೆೆ, ವಿಷ್ಣು ಸಹಸ್ರ ನಾಮ, ರಾಮತಾರಕ ಮಂತ್ರಜಪಯಜ್ಞಗಳ ಸಮಾರೋಪ, ಸಂತ ಸಮಾಗಮ ಜರಗಲಿದೆ ಎಂದರು.
ತತ್ವಜ್ಞಾನ ಸಮ್ಮೇಳನದ ವಿಜ್ಞಾನಪನ ಪತ್ರವನ್ನು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು. ಬಳಿಕ ಸ್ವಾಗತ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್, ಕೋಶಾಧಿಕಾರಿ ಶ್ರೀಶ ನಾಯಕ್ ಪೆರ್ಣಂಕಿಲ, ಸುಬ್ರಹ್ಮಣ್ಯ ಭಟ್, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಪ್ರಮುಖರಾದ ಪ್ರಸನ್ನ ಆಚಾರ್ಯ, ಡಾ ಗೋಪಾಲಾಚಾರ್ಯ, ಡಾ ಸಗ್ರಿ ಆನಂದತೀರ್ಥ ಆಚಾರ್ಯ, ಸಂದೀಪ ಮಂಜ, ಅನಂತ ಸಾಮಗ, ಉಮೇಶ್ ನಾಯಕ್, ಪದ್ಮಾ, ಕೃಷ್ಣ, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.