ತುಮಕೂರು: ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ಲಕ್ಷ್ಮೀಪುರದ ಉಲ್ಲಾಳಬೆಟ್ಟದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಯೂರುದುರ್ಗ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಲಕ್ಷ್ಮೀಪುರದ ಶಂಕರ (30), ಹಾಗೂ ಬೂದಾನಹಳ್ಳಿಯ ನಾಗೇಶ್ (32), ಬಂಧಿತ ಆರೋಪಿಗಳು. ಹುಲಿಯೂರುದುರ್ಗ ಬಳಿಯ ಮೂದನಹಳ್ಳಿ ಗ್ರಾಮದ ಪ್ರದೀಪ್ ಕೊಲೆಯಾಗಿದ್ದ ವ್ಯಕ್ತಿ.
ಕಳೆದ ಗುರುವಾರ ಸಂಜೆ ಕೊಲೆಯಾದ ಸ್ಥಿತಿಯಲ್ಲಿ ಪ್ರದೀಪ್ ಮೃತದೇಹ ಪತ್ತೆಯಾಗಿತ್ತು.
ಕೊಲೆಯಾದ ಪ್ರದೀಪ್, ಶಂಕರ ಹಾಗೂ ನಾಗೇಶ್ ಮೂವರು ಸ್ನೇಹಿತರಾಗಿದ್ದರು. ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕನಾಗಿದ್ದ ಪ್ರದೀಪ್, ಇತ್ತೀಚೆಗೆ ಶಂಕರ ಹಾಗೂ ನಾಗೇಶ್ ಜೊತೆ ದುವರ್ತನೆ ತೋರಿ ಮನಬಂದಂತೆ ನಡೆದುಕೊಳ್ಳುತ್ತಿದ್ದ.
ಇದೇ ವಿಚಾರಕ್ಕೆ ಕಳೆದ 27 ರಂದು ಹುಲಿಯೂರುದುರ್ಗ ಪಟ್ಟಣದ ಬಾರ್ ವೊಂದರಲ್ಲಿ ಮದ್ಯ ತೆಗೆದುಕೊಂಡು, ಉಲ್ಲಾಳಬೆಟ್ಟದಲ್ಲಿ ಪಾರ್ಟಿ ಮಾಡಿ ಬಳಿಕ ಪ್ರದೀಪ್ ಗೆ ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಶಂಕರ ಹಾಗೂ ನಾಗೇಶ್ ನಾಪತ್ತೆಯಾಗಿದ್ದರು.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.