ಉಡುಪಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ರೀಲ್ಸ್ ರಾಣಿ ಪ್ರತಿಮಾ, ತನ್ನ ಸಹೋದರನಿಗೂ ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ತನ್ನ ಅಕ್ರಮ ಸಂಬಂಧಕ್ಕೆ ಸಹೋದರ ಅಡ್ಡಿಯಾಗುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಸೈಲೆಂಟ್ ಆಗಿ ಮುಗಿಸಲು ಪ್ಲ್ಯಾನ್ ಹಾಕಿದ್ದಳು ಎಂಬ ಅನುಮಾನ ಮೂಡಿದೆ.
ಹೌದು, ಪ್ರತಿಮಾಳ ಘನಘೋರ ಕೃತ್ಯವನ್ನು ಬಯಲಿಗೆ ತಂದವರೇ ಸಹೋದರ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಪ್ರತಿಮಾಳ ಸಂಚು ಬಯಲು ಮಾಡಿದ್ದರು. ಅಲ್ಲದೆ, ಈ ಪ್ರಕರಣದ ಪ್ರಮುಖ ಸಾಕ್ಷಿ ಕೂಡ ಅವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸಹೋದರನಿಗೂ ವಿಷ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಹೋದರ ಸಂದೀಪ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿರುವುದು ಎಷ್ಟೆಲ್ಲ ಸಂಶಯಕ್ಕೆ ಕಾರಣ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಪಿ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಅವರು, ನನ್ನ ಆರೋಗ್ಯದಲ್ಲೂ ಕೆಲವು ತಿಂಗಳಿನಿಂದ ವ್ಯತ್ಯಾಸ ಉಂಟಾಗುತ್ತಿದೆ. ಸ್ನಾಯು ಸೆಳೆತ, ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೇನೆ. ಮಗುವಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಊಟ ಮಾಡಿದ್ದೆ. ಹೀಗಾಗಿ ನನಗೂ ನನ್ನ ತಂಗಿ ವಿಷವುನಿಸಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ನಾನು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುತ್ತೇನೆ ಎಂದರು.
ನನ್ನ ಸಹೋದರಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಗೆ ಕಠಿಣ ಶಿಕ್ಷೆ ಆಗಬೇಕು. ಇಬ್ಬರಿಗೂ ಜೀವಾವಧಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಕೊಲೆ ಪ್ರಕರಣ ಬಯಲಿಗೆ ಬಂದಾಗ ಅನಾಮಿಕ ಕರೆ ಬಂದಿತ್ತು. ವಿಷಯ ಸೆಟಲ್ ಮಾಡಿಕೊಳ್ಳೋಣ ನಿನಗೆ ಹಣ ಕೊಡುತ್ತೇವೆ ಎಂದಿದ್ದರು. ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿ ನೀಡುತ್ತೇವೆ ಎಂದು ಆಮಿಷಯೊಡ್ಡಿದ್ದರು. ಯಾರು ಕರೆ ಮಾಡಿದ್ದಾರೋ ಗೊತ್ತಿಲ್ಲ, ಸಾವಿನ ಟೆನ್ಶನ್ ನಲ್ಲಿ ನಾನು ಗಮನ ಕೊಟ್ಟಿಲ್ಲ. ಮಕ್ಕಳ ಭವಿಷ್ಯ ನೋಡಿಕೊಳ್ಳೋಣ ಎಂದು ಹೇಳಿದ್ದರು. ಆದರೆ ಈ ಪ್ರಕರಣದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.