ರಾಮನಗರ: ವಾಲ್ಮೀಕಿ ಮತ್ತಯ ಮುಡಾ ಹಗರಣ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ- ಜೆಡಿಎಸ್ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ನಡೆಸಿದ್ದು ಇಂದಿಗೆ ಮೂರನೇ ದಿನ ದೋಸ್ತಿ ಪಕ್ಷಗಳ ಪಾದಯಾತ್ರೆ ರಾಮನಗರ ಜಿಲ್ಲೆ ಪ್ರವೇಶಿಸಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಪಾದಯಾತ್ರೆಯಲ್ಲಿ ನಡೆಯುತ್ತಿರುವ ವೇಳೆ ಬೆಂಗಳೂರಿನ ಬಸವನಗುಡಿಯ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರು ಅದಾಗಲೇ ಅವರು ಕೊನೆಯುಸಿರೆಳೆದಿದ್ದರು. ಗೌರಮ್ಮ ಮೃತದೇಹ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತ ಕಾರ್ಯಕರ್ತೆಯ ಅಂತಿಮ ದರ್ಶನ ಪಡೆದರು.
ಇನ್ನು ಚನ್ನಪಟ್ಟಣದಲ್ಲಿ ಪಾದಯಾತ್ರೆ ವೇಳೆ ಬಿಜೆಪಿ ಮುಖಂಡರೊಬ್ಬರು ಅಸ್ವಸ್ಥಗೊಂಡಿದ್ದಾರೆ. ಬೆಂಗಳೂರಿನ ಜಯನಗರದ ಮಂಡಳ ಉಪಾಧ್ಯಕ್ಷ ಶಂಕರ್ ಅವರು ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ ಹಾಗೂ ರವಿಸುಬ್ರಹ್ಮಣ್ಯ ಅವರು ಆಸ್ಪತ್ರಗೆ ಭೇಟಿ ನೀಡಿ ಶಂಕರ್ ಅವರ ಆರೋಗ್ಯ ವಿಚಾರಿಸಿದರು.