Bengaluru 24°C
Ad

ರಾಜ್ಯದಲ್ಲಿ ಕನ್ನಡ ಗಟ್ಟಿಗೊಳಿಸುವ ಕೆಲಸವಾಗಬೇಕು: ಹಂಸಲೇಖ

ರಾಜ್ಯದಲ್ಲಿ ಕನ್ನಡ ಗಟ್ಟಿಗೊಳಿಸುವ ಕೆಲಸವಾಗಬೇಕಿದ್ದು, ಈ ಕಾರ್ಯದಲ್ಲಿ ಭೀಮಾ ಪರಿವಾರ ಹೆಚ್ಚು  ತೊಡಗಿಕೊಳ್ಳಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಮೈಸೂರು: ರಾಜ್ಯದಲ್ಲಿ ಕನ್ನಡ ಗಟ್ಟಿಗೊಳಿಸುವ ಕೆಲಸವಾಗಬೇಕಿದ್ದು, ಈ ಕಾರ್ಯದಲ್ಲಿ ಭೀಮಾ ಪರಿವಾರ ಹೆಚ್ಚು  ತೊಡಗಿಕೊಳ್ಳಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ಕಿರುರಂಗಮಂದಿರದಲ್ಲಿ ಸಾಹಿತ್ಯ ಲೋಕದಿಂದ ನಡೆದ ಲೇಖಕ ಎಡೆಯೂರು ಸಮೀವುಲ್ಲಾ ವಿರಚಿತ ನೆನಪಿನ  ಚಿತ್ತಾರಗಳು ಮತ್ತು ನೆನಪಿನ ಮಳೆಬಿಲ್ಲು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಕ್ಕು ಚಲಾಯಿಸಲು ಇರುವ ಏಕೈಕ ಆಯುಧ ಕನ್ನಡ. ಈ ಆಯುಧವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಹೀಗಾಗಿ ಕನ್ನಡದ ಸಂಘಟನೆಯಲ್ಲಿ ಭೀಮಾ ಪರಿವಾರ ಹೆಚ್ಚು ತೊಡಗಿಕೊಳ್ಳಬೇಕು ಎಂದರು.

ಕನ್ನಡ ಎಂಬುದು ಕರ್ನಾಟಕ ಪ್ರಾದೇಶಿಕ ನಕಾಶೆಯ ಬೆನ್ನು ಹುರಿ ಹಾಗೂ ಮೆದುಳು ಬಳ್ಳಿ. ರಾಜ್ಯದ ಒಕ್ಕೂಟದ  ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ, ತೊಂದರೆಯಾಗುವುದು ಬೆನ್ನು ಹುರಿ, ಮೆದುಳು ಬಳ್ಳಿಗೆ. ರಾಜ್ಯದ ಸಂಪತ್ತು ನಾವು ಹಕ್ಕಾಗಿ ಪಡೆದುಕೊಂಡಿದ್ದೇವೆ. ಇದಕ್ಕಾದರೂ ಕನ್ನಡ ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಎಲ್ಲ, ಧರ್ಮ, ಸಮುದಾಯ ತಬ್ಬಲಿ ಜಾತಿಗಳು ಕನ್ನಡವನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಇದರಿಂದ ಯಾರಾದರೂ ನಮ್ಮ ಸುದ್ದಿಗೆ ಬಂದರೆ ಅವರನ್ನು ವಿಚಾರಿಸಿಕೊಳ್ಳಲು ಕನ್ನಡವೆಂಬ ಹಕ್ಕಿದೆ ಎಂಬುದನ್ನು ತೋರಿಸಬೇಕು ಎಂದರು.

ಲೇಖಕರ ಹೆಸರು ಸಮೀವುಲ್ಲಾ. ಇವತ್ತು ಈ ಹೆಸರು ದೇಶಕ್ಕೆ ಒಂಥಾರ ಬೇಕಾಗಿಲ್ಲ. ಆದರೆ, ನಮಗೆ ಹಾಗೂ ದೇಶಕ್ಕೆ ಬೇಕು.  ಜಾಗತಿಕ ಮಟ್ಟದಲ್ಲಿ ರಕ್ಷೆ ಇದೆ. ಅವನ ಕೈಯಲ್ಲಿ ಒಂದು ಗ್ರಂಥವಿದೆ. ಅವನನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ. ಆದರೆ, ಅದನ್ನೆಲ್ಲ ಬಿಟ್ಟು ಈ ಕನ್ನಡದ ಬೆನ್ನು ಬಿದ್ದಿದ್ದಾನೆ. ಯಾಕೆಂದರೆ ಕನ್ನಡದ ದೀಪದಲ್ಲಿ ಉರಿದು (ಉರ್ದು) ಕನ್ನಡಕ್ಕೆ ಕಾವಲಾಗಿದ್ದಾನೆ. ಆತನ ಕನ್ನಡ ಪ್ರೀತಿ ನನಗೆ ಯಾವಾಗಲೂ ಸೆಳೆಯುತ್ತದೆ. ತನ್ನ ಹೆಸರಿನ ಮುಂದೆ ಎಡೆಯೂರು ಸೇರಿಸಿಕೊಂಡಿರುವುದು ತುಂಬಾ ಸೊಗಸಾಗಿದೆ. ಕರೀಂಖಾನ್ ತರಹ ಕನ್ನಡ ಉಸಿರಾಗಿಸಿಕೊಂಡಿದ್ದಾರೆ ಎಂದರು.

ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್ ಮಾತನಾಡಿ, ಕವಿ, ಸಾಹಿತಿಗಳು ಬರವಣೆಗೆಯ ಮೂಲಕ ಕನ್ನಡ ಹೋರಾಟವನ್ನು  ಶ್ರೀಮಂತಗೊಳಿಸಿದ್ದಾರೆ. ಚಳವಳಿಗಳ ಮೂಲಕ ಹೋರಾಟಗಾರರು ಕನ್ನಡವನ್ನು ಮೆರವಣಿಗೆ ಮಾಡಿದ್ದಾರೆ. ಈ ಎರಡು ಒಗ್ಗೂಡಿ ಕನ್ನಡದ ಬೆಳವಣಿಗೆಯಾಗಬೇಕು. ಸಮೀವುಲ್ಲಾ ಅವರು ಈವರೆಗೂ ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಬರವಣಿಗೆಯ ಮೂಲಕ ಛಾಪು ಮೂಡಿಸಿದ್ದಾರೆ ಎಂದರು.

ಸಂಸ್ಕೃತಿ, ಜೀವನ, ಪರಿಚಯ ಎನ್ನುವುದು ಖೋ- ಖೋ ಆಟದ ರೀತಿ. ಇಲ್ಲಿ ಆಟಗಾರ ಅಂಕಣದಲ್ಲಿ ನಿಲ್ಲದೆ ಓಟದಲ್ಲಿ ತೊಡಗಿ ಕೊ ಕೊಡುತ್ತಿರಬೇಕು. ಬದುಕು ಕೂಡ ಹಾಗೇ ನಿರಂತರವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಗಾಯಕ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಭಾವಗೀತೆಗಳ ಗಾನಯಾನ ನಡೆಸಿಕೊಟ್ಟರು. ಹಂಸಲೇಖ ರಾಗ ಸಂಯೋಜನೆಯ ಸಂವಿಧಾನ ಪೀಠಿಕೆ ಗೀತೆಯನ್ನು ದರ್ಶನ್ ಹಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಲೋಕ ಅಧ್ಯಕ್ಷ ವೈ.ಡಿ.ರಾಜಣ್ಣ, ಶೇಖರ್, ಇಂದ್ರಾಣಿ, ಅಶ್ವಿನಿ, ಎ.ಜಿ.ದೇವರಾಜು, ಲತಾ ಹಂಸಲೇಖ, ವೇದ ಡಿ.ರಜೋಲಿ ಭಾಗವಹಿಸಿದ್ದರು.

Ad
Ad
Nk Channel Final 21 09 2023
Ad