ಮೈಸೂರು: ಕೆಸರೆ ಗ್ರಾಮದ ಸರ್ವೇ ನಂ.464ರ ಸಂಬಂಧ ನಿಮ್ಮ ಅಧಿಕಾರಿ ಮತ್ತು ಕಾನೂನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಂಬಂಧಿಸಿದ ದಾಖಲೆಗಳೊಂದಿಗೆ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಿ ಹಾಗೂ ನ್ಯಾಯಾಂಗ ನಿಂದನೆ ಆಗುವುದನ್ನು, ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ತಪ್ಪಿಸಿ ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್ ಅವರಿಗೆ ಪತ್ರ ಬರೆದಿದ್ದಾರೆ.
ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿಕೊಂಡು ಅವರ ಕುಟುಂಬದವರ ಹೆಸರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ನಾನು ಹಲವಾರು ದೂರರ್ಜಿಗಳನ್ನು ನೀಡಿದ್ದೇನೆ. ಕೊನೆಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮೂಲಕ ಮೈಸೂರಿನ ಲೋಕಾಯುಕ್ತದಲ್ಲಿ 11/2024 ಸಂಖ್ಯೆಯ ಮೊಕದ್ದಮೆ ದಾಖಲು ಮಾಡಿಸಲಾಯಿತು.
ಇದೇ ರೀತಿ ಇತರ ಜನಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳು ಸಹ ಅಕ್ರಮವಾಗಿ ನಿವೇಶನ ಪಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಎಲ್ಲ ತಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನು ಮನವಿ ಮಾಡಿಕೊಂಡಿದ್ದೆ. ಬಳಿಕ ಸರ್ಕಾರದಿಂದಲೇ ನೇಮಕವಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಈ ವಿಚಾರದ ಬಗ್ಗೆ ವಿಚಾರಣೆ ನಡೆಸುತ್ತಿರುವುದು, ನನ್ನ ದೂರರ್ಜಿ ಆಧರಿಸಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ನಿಮಗೆ ಗೊತ್ತಿರುವ ವಿಚಾರ.
ಸದರಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಪ್ತರು, ಕಾಂಗ್ರೆಸ್ ಮುಖಂಡರು ದೂರುದಾರನಾದ ನನ್ನ ವಿರುದ್ಧ, ಇತರ ದೂರುದಾರರ ವಿರುದ್ಧ ಹಾಗೂ ನಮ್ಮ ಮನವಿ ಪರಿಗಣಿಸಿ, ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ, ಸಿದ್ದರಾಮಯ್ಯ ಅವರ ರಿಟ್ ಅರ್ಜಿ ವಜಾ ಮಾಡಿದ ಉಚ್ಚ ನ್ಯಾಯಾಲಯದ ವಿರುದ್ಧ, ನನ್ನ ಖಾಸಗಿ ದೂರರ್ಜಿ ಆಧರಿಸಿ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸುವಂತೆ ಆದೇಶ ಮಾಡಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದರಿಂದ ರಾಜ್ಯದ ಜನತೆ ನಮ್ಮಂತಹ ಹೋರಾಟಗಾರರು, ನ್ಯಾಯಾಲಯಗಳನ್ನು ಅನುಮಾನದಿಂದ ನೋಡುವಂತಹ, ಸಮಾಜದ ಸ್ವಾಸ್ಥ್ಯ ಹಾಳಾಗುವಂತಹ ದುಸ್ಥಿತಿ ನಿರ್ಮಾಣ ಆಗುತ್ತಿದೆ. ಇದೆಲ್ಲ ಆಗುತ್ತಿರುವುದು ನಿಮ್ಮ ಸಂಸ್ಥೆಯ ಸ್ವತ್ತನ್ನು ಕಾಪಾಡಲು, ಅನ್ಯರ ಪಾಲಾಗಿರುವ ಸ್ವತ್ತನ್ನು ಮರಳಿ ನಿಮ್ಮ ಸಂಸ್ಥೆಗೆ ವಾಪಸ್ಸು ಕೊಡಿಸಲು ಹೋರಾಟ ಮಾಡುತ್ತಿರುವುದರಿಂದ.
ನಿಮ್ಮ ಸಂಸ್ಥೆಗಾಗಿ ನಾವು ಹೋರಾಟ ನಡೆಸುತ್ತಿದ್ದರೆ, ಸಂಸ್ಥೆಯಿಂದ ಸಂಬಳ, ಸೌಲಭ್ಯ ಪಡೆಯುವ ನೀವು ಮತ್ತು ನಿಮ್ಮ ಸಂಸ್ಥೆಯ ಇತರ ಅಧಿಕಾರಿಗಳು ಮೌನವಾಗಿರುವುದು ಈ ದೇಶದ ದುರಂತ. ನೀವು ಮತ್ತು ನಿಮ್ಮ ಸಂಸ್ಥೆಯ ಇತರ ಅಧಿಕಾರಿಗಳು ಮೌನವಾಗಿರುವುದರಿಂದ ದೂರುದಾರರಾದ ನಮಗೆ ಅವಮಾನ ಆಗುವುದಕ್ಕಿಂತ ಹೆಚ್ಚಾಗಿ, ನ್ಯಾಯಾಲಯಗಳಿಗೆ ಹೆಚ್ಚಿನ ಅವಮಾನವಾಗುತ್ತಿದೆ.
ನ್ಯಾಯಾಂಗದ ನಿಂದನೆ ಆಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಅಂದರೆ ನ್ಯಾಯಾಲಯಗಳ ನಿಂದನೆಗೆ, ಸಮಾಜದ ಸ್ವಾಸ್ಥ್ಯ ಹಾಳಾಗುವುದಕ್ಕೆ ನೀವು ಮತ್ತು ನಿಮ್ಮ ಸಂಸ್ಥೆಯ ಇತರ ಅಧಿಕಾರಿಗಳು ಕಾರಣರಾಗಿರುತ್ತೀರಿ. ಇದೊಂದು ಅತ್ಯಂತ ಗಂಭೀರ ವಿಚಾರವಾಗಿರುವುದರಿಂದ ನಿಮಗೆ ಈ ಮನವಿಪತ್ರ ನೀಡುತ್ತಿದ್ದೇನೆ.
ಹೀಗಾಗಿ ಕೂಡಲೇ ಕೆಸರೆ ಗ್ರಾಮದ ಸರ್ವೇ ನಂ.464ರ ಸಂಬಂಧ ನಿಮ್ಮ ಅಧಿಕಾರಿಗಳು, ಕಾನೂನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಈ ವಿಚಾರಗಳ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡುವ ಮೂಲಕ ರಾಜ್ಯ ಜನತೆಗೆ ಸತ್ಯಾಂಶ ತಿಳಿಸಬೇಕಾಗಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
ನೀವು ಈ ಮನವಿ ಪತ್ರ ಸ್ವೀಕರಿಸಿದ ಮೂರು ದಿನಗಳಲ್ಲಿ ಮೇಲ್ಕಂಡ ನನ್ನ ಮನವಿಯಂತೆ ರಾಜ್ಯದ ಜನತೆಗೆ ಸತ್ಯವನ್ನು ತಿಳಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯಂತಹ ಕೃತ್ಯಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದೀರಾ ಎಂದು ಪರಿಗಣಿಸಿ, ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.